ರಾಧಾ-ಕೃಷ್ಣರ ಅಶ್ಲೀಲ ಪೇಂಟಿಂಗ್ ಒಂದನ್ನು ಮಾರಾಟಕ್ಕಿಟ್ಟಿರುವ ಅಮೆಜಾನ್ ವಿರುದ್ಧ ಆನ್‌ಲೈನ್ ಸಮರ ಶುರುವಾಗಿದೆ. ಟ್ವಿಟ್ಟರ್‌ನಲ್ಲಿ ಬಾಯ್ಕಾಟ್ ಅಮೆಜಾನ್ ಎಂಬ ಟ್ರೆಂಡ್ ಜೋರಾಗಿದೆ. ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಅಮೆಜಾನ್ ವಿರುದ್ಧ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೂಡಲೇ ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ. ಜನ್ಮಾಷ್ಠಮಿಯ ವಿಶೇಷ ಮಾರಾಟದ ಪ್ರಯುಕ್ತ ಅಮೆಜಾನ್‌ನಲ್ಲಿ ರಾಧಾ-ಕೃಷ್ಣರ ಅಶ್ಲೀಲ ಪೇಂಟಿಂಗ್ ಅನ್ನು ಎಕ್ಸೋಟಿಕ್ ಇಂಡಿಯಾ ಸೇಲ್ ಮಾಡ್ತಾ ಇದೆ ಎಂದು ಸಂಘಟನೆ ಆರೋಪಿಸಿದೆ.
ಆಗಸ್ಟ್ 18 ಹಾಗೂ 19ರಂದು ಜನ್ಮಾಷ್ಠಮಿ ಆಚರಿಸಲಾಗಿದೆ. ಪೇಂಟಿಂಗ್ ಬಗ್ಗೆ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ಅಮೆಜಾನ್ ಹಾಗೂ ಎಕ್ಸೋಟಿಕ್ ಇಂಡಿಯಾ ಅದನ್ನು ತೆಗೆದು ಹಾಕಿವೆ. ಆದ್ರೆ ಎರಡೂ ಸಂಸ್ಥೆಗಳು ಕ್ಷಮೆ ಕೇಳಬೇಕು, ಭವಿಷ್ಯದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲವೆಂದು ಭರವಸೆ ನೀಡಬೇಕು ಅಂತಾ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಈ ವಿವಾದದ ಬಗ್ಗೆ ಅಮೆಜಾನ್ ಇದುವರೆಗೂ ಪ್ರತಿಕ್ರಿಯಿಸಿಲ್ಲ.