ಬೆಂಗಳೂರು: ಅಮುಲ್ ಬ್ರ್ಯಾಂಡ್ ರಾಜ್ಯದ ಮಾರುಕಟ್ಟೆಗೆ ಆಗಮಿಸಿರುವ ವಿಚಾರವಾಗಿ ವಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಸುಧಾಕರ್, ನಂದಿನಿಯನ್ನು ಹಿಮ್ಮೆಟ್ಟಿಸಲು ಅಮುಲ್ ಬಂದಿಲ್ಲ. ವಿಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಾಲಿಗೆ ಪ್ರೋತ್ಸಾಹ ಧನ ಕೊಡುತ್ತಿರುವುದೇ ಬಿಜೆಪಿ ಸರ್ಕಾರ. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ಕೊಡುತ್ತಿರುವುದು ನಮ್ಮ ಸರ್ಕಾರ. ಕೆ ಎಂ ಎಫ್ ಆದಾಯದಲ್ಲಿ ಹಾಲು ಉತ್ಪಾದಕರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ನಂದಿನಿ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆ, ತಿರುಪತಿ, ತಿರುಮಲ, ಮಹಾರಾಷ್ಟ್ರಕ್ಕೆ ನಂದಿನಿ ಹಾಲು ಪೂರೈಕೆಯಾಗುತ್ತಿದೆ. ನಂದಿನಿ ರಾಷ್ಟ್ರ ಮಟ್ಟದಲ್ಲಿ ಬ್ರ್ಯಾಂಡ್ ಆಗಲಿದೆ ಎಂದರು.
ಇತರೆ ಬ್ರ್ಯಾಂಡ್ ಹಾಲು ರಾಜ್ಯದಲ್ಲಿ ಈ ಹಿಂದಿನಿಂದಲೂ ಮಾರಾಟ ಮಾದಲಾಗುತ್ತಿದೆ. ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ? ಎಂದು ಪ್ರಶ್ನಿಸಿದ ಸುಧಾಕರ್, ಈ ರೀತಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಗುಡುಗಿದರು.