ಬೆಂಗಳೂರು: ರೌಡಿಗಳ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿ ವಿಚಾರವಾಗಿ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಇಬ್ಬರು ಎಂಪಿಗಳು ಅಲ್ಲಿಗೆ ಹೋಗಿದ್ದಾರೆ. ಸರ್ಚ್ ವಾರೆಂಟ್ ಇರುವವನ ಜೊತೆ ಸಂಸದರು ಇದ್ದಾರೆ. ಇದು ಸರಿನಾ? ಈ ಬಗ್ಗೆ ಕೇಳಿದರೆ ಬಿಜೆಪಿ ನಾಯಕರು ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸೈಲೆಂಟ್ ಸುನೀಲ್ ಅನ್ನೋನು ಎಲ್ಲರಿಗೂ ಗೊತ್ತಿರುವ ರೌಡಿ. ಫೈಟರ್ ರವಿಯನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ನೋಡುತ್ತಿದ್ದಾರೆ. ಇದನ್ನು ಹೇಳಿದರೆ ಕಾಂಗ್ರೆಸ್ ನಲ್ಲಿಯೂ ಇದ್ದಾರೆ ನೋಡಿ ಎಂದು ಹೇಳ್ತಾರಲ್ಲ, ಬಿಜೆಪಿಯವರಿಗೆ ಇದೊಂದು ಅಂಟುರೋಗ ಆಗಿದೆ. ಸಿಎಂ ಬೊಮ್ಮಾಯಿ ಅವರು ಎಲ್ಲದಕ್ಕೂ ಹಿಂದಿನ ಸರ್ಕಾರದಲ್ಲಿ ಇತ್ತು ಈಗ ನಾವು ಮಾಡಿದ್ದೇವೆ ಎನ್ನುತ್ತಾರೆ. ಮೊದಲು ನಿಮ್ಮ ತಪ್ಪುಗಳ ಬಗ್ಗೆ ಹೇಳಿ ಅದನ್ನು ಬಿಟ್ಟು ಮೊಂಡುತನ ಮಾಡುವುದು ಸರಿಯಲ್ಲ ಎಂದು ಗುಡುಗಿದರು.
ಕಾಂಗ್ರೆಸ್ ನವರು ಜೈಲಿಗೆ ಹೋಗಿದ್ರು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಮಿತ್ ಶಾ ಎಲ್ಲಿಗೆ ಹೋಗಿದ್ರು? ಮಾವನ ಮನೆಗೆ ಹೋಗಿದ್ರಾ? ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅಂತಹ ವ್ಯಕ್ತಿಯೇ ಬಿಜೆಪಿ ಅಧ್ಯಕ್ಷ, ಹೋಮ್ ಮಿನಿಸ್ಟರ್ ಆಗಿದ್ದಾರೆ. ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಇದೆ. ರೌಡಿಶೀಟರ್ ಅಲ್ಲ. ರೌಡಿಶೀಟರ್ ನಲ್ಲಿ ಅವರ ಹೆಸರಿದೆಯಾ? ಫೈಟರ್ ರವಿ ಹೆಸರು ಹೇಗಿದೆ ಅಂತ ನೋಡಿ… ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಬರಿ ಇಂತದ್ದೇ ಕೆಲಸ ಮಾಡೋದು. ಅಶಾಂತಿ ನಿರ್ಮಾಣ ಮಾಡಬೇಕಾದ್ರೆ ಅವರಿಗೆ ಇವರೆಲ್ಲ ಬೇಕು. ಅವರದ್ದು ಬರಿ ಸಮರ್ಥನೆ ಅಲ್ಲ ಮೊಂಡುತನ, ಭಂಡತನ… ಮಾನ ಮರ್ಯಾದೆ ಇಲ್ಲದಿದ್ದರೆ ಹೀಗೆಲ್ಲ ಆಗೋದು ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.