ರಾಮನಗರ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಸಂಘಟನೆಗಳು ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮಕ್ಕಳ ಪೋಷಕರು ಅರ್ಥ ಮಾಡಿಕೊಳ್ಳಬೇಕು. ಪಕ್ಷ, ಸಂಘಟನೆ ಮುಖಂಡರು ಯಾರೂ ತಮ್ಮ ಮಕ್ಕಳನ್ನು ಈ ವಿವಾದಕ್ಕೆ ಕಳಿಸುತ್ತಿಲ್ಲ. ಬಡ, ಅಮಾಯಕ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಧರಣಿ ಮಾಡುವ ಮಕ್ಕಳ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವಿಡಿಯೋ ಇಟ್ಟುಕೊಂಡು ಕೋರ್ಟ್, ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಈಗಾಗಲೇ ಕೆಲವರ ವಿರುದ್ಧ ಎಫ್ ಐ ಆರ್ ಆಗಿದೆ. ಸಾವಿರಾರು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಅಮಾಯಕ, ಬಡ ಮಕ್ಕಳ ಭವಿಷ್ಯದ ಜತೆ ರಾಜಕೀಯ ಪಕ್ಷಗಳು, ಸಂಘಟನೆಗಳು ಚಲ್ಲಾಟವಾಡುತ್ತಿದ್ದರೆ ತಮ್ಮ ತೆವಲಿಗೆ ಪಕ್ಷ, ಸಂಘಟನೆಗಳು ಇಂತಹ ಕೆಲಸ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಈ ಸಂಘರ್ಷ ಯಾವ ಶಾಲೆಗಳಲ್ಲಿ ನಡೆಯುತ್ತಿವೆ? ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿವೆಯೆ? ಇಲ್ಲ, ಸಂಘಟನೆ, ಪಕ್ಷಗಳ ಮುಖಂಡರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಅವರ ಮಕ್ಕಳಿಗೆ ಹಿಜಾಬ್, ಕೇಸರಿ ಶಾಲು ಹಾಕಿ ಹೋರಾಟ ಮಾಡಿಸುತ್ತಿಲ್ಲ. ಬದಲಾಗಿ ಬಡ ಮಕಳನ್ನು ಹೋರಾಟಕ್ಕೆ ಬಳಸಿಕೊಂಡು ಅವರ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ. ಈ ಬಗ್ಗೆ ಮಕ್ಕಳು, ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.