ಶ್ರೀನಗರ: ಅಮರನಾಥದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, 45ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
15,000 ಯಾತ್ರಾರ್ಥಿಗಳು ಅಮರನಾಥ ದರ್ಶನಕ್ಕಾಗಿ ತೆರಳಿದ್ದರು. ಈ ವೇಳೆ ಸಂಭವಿಸಿದ ಮೇಘಸ್ಫೋಟ, ಭೀಕರ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸಂಕಷ್ಟದಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಏರ್ ಲಿಫ್ಟ್ ಮಾಡಲಾಗುತ್ತಿದೆ.
ಈ ನಡುವೆ ಜಮ್ಮು- ಕಾಶ್ಮೀರ ಸರ್ಕಾರ ಅಮರನಾಥದಲ್ಲಿ ಸಂಕಷ್ಟದಲ್ಲಿ ಸಿಲುಕಿದವರ ಸಹಾಯಕ್ಕಾಗಿ ಸಹಾಯವಾಣಿ ಆರಂಭಿಸಿದೆ. ಭಾರತೀಯ ಸೇನೆ, ಎನ್ ಡಿ ಆರ್ ಎಫ್ ತಂಡಗಳು ಸಮರೋಪಾದಿಯಲ್ಲಿ ಯಾತ್ರಿಕರ ರಕ್ಷಣಾಕಾರ್ಯ ನಡೆಸಿದ್ದಾರೆ.
ಮೇಘಸ್ಫೋಟ ಹಿನ್ನೆಲೆಯಲ್ಲಿ ಇಂದು ಅಮರನಾಥ ದರ್ಶನ ರದ್ದುಗೊಳಿಸಲಾಗಿದ್ದು, ಅಮರನಾಥಕ್ಕೆ ತೆರಳುತ್ತಿರುವ ಯಾತ್ರಿಕರನ್ನು ಮಾರ್ಗಮಧ್ಯೆಯೇ ವಾಪಸ್ ಕಳುಹಿಸಲಾಗುತ್ತಿದೆ.