ಬೆಂಗಳೂರು: ಪವಿತ್ರ ಯಾತ್ರಾಸ್ಥಳ ಅಮರನಾಥ್ ದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದ್ದು, 15 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸೇಫ್ ಆಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯದ ನೂರಕ್ಕೂ ಹೆಚ್ಚು ಜನರು ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಕನ್ನಡಿಗರೆಲ್ಲರೂ ಸುರಕ್ಷಿತರಾಗಿದ್ದಾರೆ. ಅಮರನಾಥ ಯಾತ್ರೆಯಲ್ಲಿರುವ ಕನ್ನಡಿಗರಿಗಾಗಿಯೇ ಸಹಾಯವಾಣಿ ತೆರೆಯಲಾಗಿದೆ. ಈಗಾಗಲೇ 15-20 ಜನರು ಹೆಲ್ಪ್ ಲೈನ್ ಗೆ ಕರೆ ಮಾಡಿದ್ದರು. ರಾಜ್ಯದ ಯಾತ್ರಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಮುಖ್ಯಕಾರ್ಯದರ್ಶಿ ಕೇಂದ್ರದ ಹಾಗೂ ಜಮ್ಮು-ಕಾಶ್ಮೀರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಅಧಿಕಾರಿಗಳ ಜತೆಯೂ ಮಾತನಾಡಿ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ ಎಂದು ಹೇಳಿದರು.