ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ಈಗ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ನನಗೂ ಇಲ್ಲ, ಸಿದ್ದರಾಮಯ್ಯ ಅವರಿಗೂ ಇಲ್ಲ. ಆ ಅಧಿಕಾರವೇನಿದ್ದರೂ ಎಐಸಿಸಿಗೆ ಮಾತ್ರ ಇದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಹೈಕಮಾಂಡ್ ಗೆ ಮಾತ್ರ ಅಭ್ಯರ್ಥಿ ತೀರ್ಮಾನಿಸುವ ಅಧಿಕಾರ ಇದೆ ಎಂದು ತಿಳಿಸಿದರು.
ಕೊಪ್ಪಳದಲ್ಲಿದ್ದವರನ್ನು ಹುರಿದುಂಬಿಸಲು ಸಿದ್ದರಾಮಯ್ಯ ಹಾಗೆ ಹೇಳಿರಬಹುದು ಅಷ್ಟೇ. ಅಭ್ಯರ್ಥಿಗಳನ್ನು ತೀರ್ಮಾನಿಸುವುದು ಹೈಕಮಾಂಡ್ ಮಾತ್ರ. ರಾಜ್ಯ ನಾಯಕರಲ್ಲ ಎಂದು ಹೇಳಿದರು.