ದಾವಣಗೆರೆ: ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ ಎಂಬುದಕ್ಕೆ ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಲೋಕಾರ್ಪಣೆ, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ನೆರವು ಇದೆಲ್ಲವೂ ಉದಾಹರಣೆಯಾಗಿವೆ ಎಂದು ಪ್ರಧಾನಿ ನರೇಂದ್ರ ಮೊದಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ಬಿಜೆಪಿಯ ವಿಜಯ ಯಾತ್ರೆಯ ಆರಂಭ ಎಂದರು. ವಿಜಯ ಸಂಕಲ್ಪ ಇಲ್ಲಿಂದಲೇ ಆರಂಭವಾಗಿದೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ರಾಜ್ಯದ ಪ್ರತಿಪಕ್ಷದ ನಾಯಕರೊಬ್ಬರು ಕಾರ್ಯಕರ್ತನ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ಜನತಾ ಜನಾರ್ಧನನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅವರ ಗ್ಯಾರಂಟಿ ರಾಜ್ಯದ ಮೇಲೆ ಪರಿಣಾಮ ಬೀರದು. ಇದಕ್ಕೆ ಹಿಮಾಚಲಪ್ರದೇಶವೇ ಉದಾಹರಣೆಯಾಗಿದೆ. ಅಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ದೊಡ್ಡ ದೊಡ್ಡ ಘೋಷಣೆ ಮಾಡಿತ್ತು. ಆದರೆ ಬಜೆಟ್ ನಲ್ಲಿ ಏನೂ ಕೊಡಲಿಲ್ಲ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ನವರಿಗೆ ಯಾವುದೇ ಪಾಸಿಟಿವ್ ಅಜೆಂಡಾಗಳಿಲ್ಲ ಎಂದರು.
ಮೋದಿ ಸಮಾಧಿಗೆ ಗುಂಡಿ ತೋಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಮೋದಿ ನಿಮ್ಮ ಕಮಲ ಅರಳಲಿದೆ ಎಂದು ಜನರು ಹೇಳುತ್ತಿದ್ದಾರೆ. ವಿಜಯ ಸಂಕಲ್ಪದ ಪ್ರಕಾಶ ರಾಜ್ಯದ ಪ್ರತಿ ಮನೆ, ಪ್ರತಿಯೊಬ್ಬರ ಮನ ತಲುಪುವಂತೆ ಮಾಡಬೇಕು ಎಂದು ಕರೆ ನೀಡಿದರು.