ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ಪಬ್, ಬಾರ್ ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬಂದಿತ್ತು. ಅಲ್ಲದೇ ಕೆಲ ದಿನಗಳ ಹಿಂದೆ ಮಂಗಳೂರಿನ ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರವೇಶ ಭಾರಿ ಸುದ್ದಿಯಾಗಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶ ಹೊರಡಿಸಿದ್ದು, ಅಪ್ರಾಪ್ತರಿಗೆ ಪಬ್, ಬಾರ್ ಗಳ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಪಬ್, ಬಾರ್ ಹಾಗೂ ಮದ್ಯದಂಗಡಿಗಳಿಗೂ ಖಡಕ್ ಸಂದೇಶ ರವಾನಿಸಿದ್ದು, ನಿಗದಿಪಡಿಸಿದ ಸಮಯದಲ್ಲಿ ಪಬ್ , ಬಾರ್ ಬಂದ್ ಮಾಡಬೇಕು. ರಾತ್ರಿ 10ಗಂಟೆಯೊಳಗೆ ಪಬ್ ಗಳಲ್ಲಿನ ಧ್ವನಿವರ್ಧಕ ನಿಲ್ಲಿಸಬೇಕು. ನಿಯಮಗಳ ಕಡ್ಡಾಯ ಪಾಲನೆ ಹಾಗೂ ಜುಲೈ 31ರೊಳಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.