ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಈಗಾಗಲೇ 17 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಘೋಷಿಸಿ ಲಾಕ್ ಡೌನ್ ಸಡಿಲಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 6 ಜಿಲ್ಲೆಗಳಿಗೆ ವಿನಾಯಿತಿ ನೀಡಿ ಅನ್ ಲಾಕ್ ಅನ್ವಯವಾಗುವಂತೆ ಆದೇಶ ಹೊರಡಿಸಿದೆ.
ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ದಾಖಲಾಗುತ್ತಿರುವ 6 ಜಿಲ್ಲೆಗಳಲ್ಲಿ ಹೊಸದಾಗಿ ಅನ್ ಲಾಕ್ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ, ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲೂ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.
ಈ ಜಿಲ್ಲೆಗಳಲ್ಲೂ ಬಸ್ ಸಂಚಾರಕ್ಕೆ ಅವಕಾಶ ನಿಡಲಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಹೋಟೆಲ್ ಗಳಲ್ಲಿ ಕುಳಿತು ತಿನ್ನಲು ಅವಕಾಶ ನೀಡಲಾಗಿದ್ದು, ಆದರೆ ಬಾರ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಉಳಿದ ಜಿಲ್ಲೆಗಳಂತೆ ಅನ್ವಯವಾಗಲಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.