ಚಿತ್ರದುರ್ಗ: ಸಾಮಾಜಿಕ ನ್ಯಾಯದ ಹೆಸರಲ್ಲಿ ಅನ್ಯಾಯದ ಮೇಲೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಭ್ರಷ್ಟಾಚಾರ, ಹಗರಣಗಳಲ್ಲೇ ಮುಳುಗಿದ್ದ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹಿರಿಯೂರಿನಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಕ್ಪ್ರಹಾರ ನಡೆಸಿದರು. ಎಲ್ಲಾ ಕಡೆಗಳಲ್ಲೂ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿತ್ತು. ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಕೊನೆಗೆ ಅನ್ನಭಾಗ್ಯದ ಅಕ್ಕಿಗೆ ಕನ್ನ ಹಾಕಿದರು. ಎಸ್ ಸಿ ಎಸ್ ಟಿ ಹಾಸ್ಟೇಲ್ ಮಕ್ಕಳಿಗಾಗಿ ಹಾಸಿಗೆ, ತಲೆದಿಂಬುಗಳನ್ನು ಕೊಡಲಾಗಿತ್ತು. ಆದರೆ ಅದನ್ನೂ ಲೂಟಿ ಮಾಡಿ ಅನ್ಯಾಯವೆಸಗಿದರು. ಬಾಯಲ್ಲಿ ಮಾತ್ರ ಆ ಭಾಗ್ಯ, ಈ ಭಾಗ್ಯ ಎಂದು ಹೇಳುತ್ತಾ ಓಡಾಡಿದರು. ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಬದಲಾಗಿ ಎಸಿಬಿ ಸ್ಥಾಪನೆ ಮಾಡಿದರು. 50ಕ್ಕೂ ಹೆಚ್ಚು ಕೇಸ್ ಗಳನ್ನು ಮುಚ್ಚಿ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಬಂಗಾರದ ಬೆಳೆಯ ನಾಡಾಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ನೀರಾವರಿ ಯೋಜನೆಗಳನ್ನು ಕಡೆಗಣಿಸಿದ್ದವು. ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ನೀರಾವರಿ ಸೌಕರ್ಯ ಒದಗಿಸಲಾಗುತ್ತಿದೆ. ರೈತರಿಗಾಗಿ ನೀರಾವರಿ ಯೋಜನೆಗಳಿಗಾಗಿ 738 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಚಿತ್ರದುರ್ಗ ಮಧ್ಯಕರ್ನಾಟಕದ ಶಕ್ತಿಕೇಂದ್ರವಾಗಲಿದೆ. ಇಸ್ರೋ ಸ್ಯಾಟಲೈಟ್ ಕೇಂದ್ರವಾಗುತ್ತಿದೆ. ಇಂಡಸ್ಟ್ರಿಯಲ್ ಟೌನ್ ಶಿಪ್ ಗಾಗಿ 1 ಸಾವಿರ ಎಕರೆ ಮೀಸಲಿಡಲಾಗಿದೆ ಎಂದು ಹೇಳಿದರು.