ಬೆಂಗಳೂರು: ರಾಜ್ಯದ ಅನ್ನದಾತರ ಪರವಾಗಿ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೂ ಹಣವಿಲ್ಲದಂತಾಗಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತವಾಗಿ ನೀಡಬೇಕು. ಅಲ್ಲದೇ ತಕ್ಷಣ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್ ಸಂಕಷ್ಟ, ಸರ್ಕಾರದ ನೀತಿಗಳಿಂದಾಗಿ ಇಂದು ರೈತರು ಪರದಾಡುವ ಸ್ಥಿತಿ ಬಂದಿದೆ. ಅನ್ನದಾತನ ಕೈಲಿ ಹಣವಿಲ್ಲದಾಗಿದೆ ಬಿತ್ತನೆ ಕಾರ್ಯವೂ ನಿಲ್ಲುವ ಪರಿಸ್ಥಿತಿಯಿದೆ ರೈತರ ಈ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರ ಕೂಡಲೇ ಉಚಿತ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಬೇಕು. ಹೆಸರು, ಉದ್ದು, ಹಲಸಂದೆ, ತೊಗರಿ ಮುಂತಾದ ದ್ವಿದಳ ಧಾನ್ಯ ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪೂರ್ವ ಮುಂಗಾರಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ರೈತರು ದ್ವಿದಳ ಧಾನ್ಯಗಳನ್ನು ಬಿತ್ತುತ್ತಾರೆ. ಬಹಳ ಹಿಂದಿನಿಂದಲು ರೈತರ ಬೇಡಿಕೆಗೆ ಆಧರಿಸಿ ಶೇ.75ರವರೆಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿತ್ತು. ಇದರಿಂದ ರೈತರು ವಾರ್ಷಿಕವಾಗಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ಹೀಗಾಗಿ ರೈತರಿಗೆ ನಾಲ್ಕು ಕಾಸು ದೊರೆಯುತ್ತಿತ್ತು. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತಿತ್ತು.
ಆದರೆ ಈ ವರ್ಷ ಶೇ.19ರಷ್ಟು ಮಾತ್ರ ಹೆಸರು ಕಾಳಿನ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ವಿತರಿಸಿರುವುದು ದ್ರೋಹ ಬಗೆದಂತೆ. ಅಲ್ಲದೇ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಳೆದ ವರ್ಷ ಬಿತ್ತನೆ ಬೀಜ ಪಡೆದ ರೈತರಿಗೆ ಈ ವರ್ಷ ನೀಡಲ್ಲ ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಹೇಳಿ ಕಳಿಸಿದ್ದಾರೆ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೀಡಾದರೂ ಸರ್ಕಾರದ ಬೇಜವಾಬ್ದಾರಿ ಸರಿಯಲ್ಲ. ತಕ್ಷಣ ಈ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.