ಬೆಂಗಳೂರು: ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಓರ್ವ ಮಂತ್ರಿ ಮಹಿಳೆಗೆ ಹೊಡೆಯುವುದು ಎಂದರೇನು? ಯಾವ ರೀತಿಯ ಸರ್ಕಾರ ರಾಜ್ಯದಲ್ಲಿದೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ, ಸಚಿವರು ಇರುವುದು ಯಾಕೆ ? ಜನರ ಸಮಸ್ಯೆ ಬಗೆಹರಿಸಲು, ಸಂಕಷ್ಟ ಪರಿಹರಿಸಲು. ಮಹಿಳೆಯರು, ಮಕ್ಕಳು, ಬಡವರು ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಾಗ ಸಮಸ್ಯೆಯನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕಾಗಿದ್ದು ಸಚಿವರ ಕರ್ತವ್ಯ. ಕೆಲವೊಮ್ಮೆ ಜನರು ಬೇಸರದಿಂದ ಮಾತನಾಡಬಹುದು. ಆದರೆ ಮಂತ್ರಿಯಾದವನು ಸ್ವಲ್ಪ ತಾಳ್ಮೆಯಿಂದ ಇರಬೇಕು. ಅದನ್ನು ಬಿಟ್ಟು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದು ಸರಿಯಲ್ಲ. ವಿ.ಸೋಮಣ್ಣ ಸಚಿವರಾಗಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.
ಒಬ್ಬ ಮಂತ್ರಿ ಮಹಿಳೆಯ ಮೇಲೆ ಕೈಮಾಡುವುದು ಅಂದರೆ ಏನು? ಅಧಿಕಾರ ಕೊಟ್ಟಿದ್ದು ಮಹಿಳೆಯರ ಮೇಲೆ, ಬಡವರ ಮೇಲೆ ಕೈ ಮಾಡಲಿ ಅಂತಾನಾ? ನೊಂದವರನ್ನು ಹೊಡೆಯಲಿ ಅಂತನಾ? ಮೊದಲು ವಸತಿ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಗುಡುಗಿದರು.