ಬೆಂಗಳೂರು: ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವುದು ಅಂತಾರೆ. ಇದೀಗ ಈ ಗಾದೆ ಮಾತು ಸಿಇಟಿ ವಿದ್ಯಾರ್ಥಿಗಳಿಗೆ ಒಪ್ಪುತ್ತಾ ಇದೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತಾವು ಶಿಕ್ಷೆ ಅನುಭವಿಸುವಂತಾಗಿದೆ.
ಹೌದು, ಸಿಇಟಿ ಪ್ರವೇಶಕ್ಕೆ ದಾಖಲಾತಿ ಪರಿಶೀಲನೆ ಸಮಯ ಮುಗಿದಿದೆ. ಆದರೂ ವಿದ್ಯಾರ್ಥಿಗಳು ಬಿಇಒ ಕಚೇರಿಗೆ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರಗಳಲ್ಲಿ ದೋಷಗಳು ಕಂಡು ಬಂದಿರೋದ್ರಿಂದ ಈ ಸಮಸ್ಯೆ ಆಗ್ತಾ ಇದೆ. ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಆಗಿದೆ ಎನ್ನಲಾಗುತ್ತಿದೆ.
ವಿದ್ಯಾರ್ಥಿಗಳು 1 ರಿಂದ 4ನೇ ತರಗತಿವರೆಗೆ ಒಂದು ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಅರ್ಜಿಯಲ್ಲಿ ಇದನ್ನು ನಮೂದಿಸಿದ್ದಾರೆ. ಪರಿಶೀಲನೆ ವೇಳೆ ಬಿಇಒ ಅಧಿಕಾರಿಗಳು 1ರಿಂದ 3ನೇ ತರಗತಿಗೆವರೆಗೆ ಮಾತ್ರ ಪರಿಶೀಲಿಸಿ ಅಪ್‌ಲೋಡ್ ಮಾಡಿದ್ದಾರೆ. ಆದರೆ ಇಲ್ಲಿ ವಿದ್ಯಾರ್ಥಿಗಳು 4ನೇ ತರಗತಿ ಬೇರೆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಹೀಗಾಗಿ ಬೇರೆ ಶಾಲೆಯ ವ್ಯಾಪ್ತಿ ಮೊದಲು ಪರಿಶೀಲನೆ ಮಾಡಿದ್ದ ಬಿಇಒ ವ್ಯಾಪ್ತಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪರಿಶೀಲನೆ ಪ್ರಕ್ರಿಯೆ ಪರಿಪೂರ್ಣಗೊಂಡಿಲ್ಲ. ಇದೀಗ ಮತ್ತೆ ವಿದ್ಯಾರ್ಥಿಗಳು ಬಿಇಒ ಕಚೇರಿ ಪ್ರಾಧಿಕಾರಕ್ಕೆ ದಾಖಲಾತಿ ಕೊಟ್ಟು ಪರಿಶೀಲನೆಗೆ ಹೇಳಬೇಕಾಗಿದೆ.