ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಹಳಿತಪ್ಪುತ್ತಿದ್ದು, ವಾಕ್ಸಮರ ತಾರಕಕ್ಕೇರುತ್ತಿವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವಿನ ವಾಗ್ದಾಳಿ ಮುಂದುವರೆದಿದ್ದು, ಸಚಿವರು ಏಕವಚನದಲ್ಲಿ ವಾಕ್ ಪ್ರಹಾರ ನಡೆಸಿದ್ದಾರೆ.
ಸಚಿವರ ಭ್ರಷ್ಟಾಚಾರದ, ನಕಲಿ ಸರ್ಟಿಫಿಕೆಟ್ ಬಗ್ಗೆ ದಾಖಲೆಗಳನ್ನು ಬಿಚ್ಚಿಡುವುದಾಗಿ ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಅಶ್ವತ್ಥನಾರಾಯಣ, ಅದೇನ್ ಬಿಚ್ಚಿಡ್ತಿಯಾ ಬಿಚ್ಚಿಡು ಬ್ಲ್ಯಾಕ್ ಮೇಲರ್….. ನೀನು 5 ಸ್ಟಾರ್ ಹೋಟೆಲ್ ನಲ್ಲಿ ಏನ್ ಬಿಚ್ಚಿಡ್ತಿದ್ದೆ ಎಂದು ಗೊತ್ತಿದೆ…… ಎಲ್ಲರ ಬಳಿ ಆಟ ಆಡಿದ ಹಾಗೆ ನನ್ನ ಬಳಿ ಆಟ ಆಡಲು ಆಗಲ್ಲ, ಫೇಲ್ಯೂರ್ ಆಗ್ತೀಯಾ ಎಂದು ಗುಡುಗಿದ್ದಾರೆ.
’ಎಲ್ಲಿದಿಯಪ್ಪಾ ಕುಮಾರಸ್ವಾಮಿ?’ ಎಂದು ಹುಡುಕಬೇಕಾದ ಕಾಲ ಬಂದಿದೆ ಎಂದು ಸಚಿವ ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ನನ್ನ ಸರ್ಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು, ಎಲ್ಲವೂ ಗೊತ್ತು, ಡಾ. ಅಶ್ವತ್ಥನಾರಾಯಣ ಅಲಿಯಾಸ್ ನಕಲಿ ಸರ್ಟಿಫಿಕೇಟ್ ರಾಜ, ಅಲಿಯಾಸ್ ನಕಲಿ ಸರ್ಟಿಫಿಕೇಟ್ ಶೂರ……ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದ್ದರು.
ಕುಮಾರಸ್ವಾಮಿಯವರಂತ ಹಿನ್ನೆಲೆ ನನಗಿಲ್ಲ, ರಾಜಕೀಯ ನನ್ನ ಜೀವನೋಪಾಯಕ್ಕೆ ಮಾಡುತ್ತಿರುವ ಕೆಲಸವಲ್ಲ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡಿತಾರೆ. ಇಂತ ಆಟ ನನ್ನ ಬಳಿ ಬೇಡ ಎಂದು ಕಿಡಿಕಾರಿದ್ದಾರೆ.