ಅತ್ಯಾಚಾರ ಪ್ರಕರಣ ಒಂದರ ಆರೋಪಿ ಜಾಮೀನು ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವರ್ಷದೊಳಗಾಗಿ ಆಕೆಯನ್ನು ಮದುವೆಯಾಗಬೇಕೆಂಬ ಷರತ್ತಿನ ಮೇರೆಗೆ ಆರೋಪಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಆದರೆ ಅತ್ಯಾಚಾರ ಸಂತ್ರಸ್ತೆ ಎಲ್ಲಿದ್ದಾಳೆಂಬುದು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದರೆ ಒಂದು ವರ್ಷದೊಳಗೆ ವಿವಾಹವಾಗಬೇಕೆಂಬ ಷರತ್ತನ್ನು ಆರೋಪಿಗೆ ನ್ಯಾಯಾಲಯ ವಿಧಿಸಿದೆ.
ಪ್ರಕರಣದ ವಿವರ: 26 ವರ್ಷದ ಆರೋಪಿ ಹಾಗೂ 22 ವರ್ಷ ವಯಸ್ಸಿನ ಯುವತಿ ಪರಸ್ಪರ ಒಪ್ಪಿಗೆ ಮೇರೆಗೆ ಸಂಬಂಧದಲ್ಲಿದ್ದರು. ಈಕೆ ಗರ್ಭಿಣಿಯಾದಾಗ ಯುವಕ ಆಕೆಯನ್ನು ದೂರ ಮಾಡಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆಕೆ ಅತ್ಯಾಚಾರ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿದ್ದಳು.
ತಾನು ಗರ್ಭಿಣಿ ಎಂಬ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದ ಯುವತಿ ಕೊನೆಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಕಟ್ಟಡ ಒಂದರ ಬಳಿ ಮಗುವನ್ನು ಇಟ್ಟು ನಾಪತ್ತೆಯಾಗಿದ್ದಳು. ಬಳಿಕ ಮಗುವನ್ನು ರಕ್ಷಿಸಿ ಶಿಶು ಪಾಲನಾ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಕಾನೂನು ಪ್ರಕಾರ ದತ್ತು ನೀಡಲಾಗಿತ್ತು. ಮಗುವನ್ನು ಬಿಟ್ಟು ಹೋದ ಯುವತಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಇದರ ಮಧ್ಯೆ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಆರೋಪಿ, ತಾನು ಆಕೆಯನ್ನು ವಿವಾಹವಾಗಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ದಾಂಗ್ರೆ ಅವರಿದ್ದ ನ್ಯಾಯಪೀಠ ಷರತ್ತಿನ ಮೇರೆಗೆ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.