ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೆರಳಿ ಕೆಂಡವಾಗಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ವಾಕ್ಪ್ರಹಾರ ಮುಂದುವರೆಸಿದ್ದು, ಗ್ರಾಮಪಂಚಾಯಿತಿ ಚುನಾವಣೆಯನ್ನೂ ಗೆಲ್ಲದವರು ಬಂದು ನಮಗೆ ಮಾರ್ಗದರ್ಶನ ಮಾಡಬೇಕಿತ್ತಾ? ಎಂದು ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಬಿಜೆಪಿ ನಾಯಕರು ಪಕ್ಷದ ಹಿರಿಯರನ್ನೇ ಕಡೆಗಣಿಸಿ ಮೂಲೆಗುಂಪು ಮಾಡಿದರು. 70 ಹೊಸಬರಿಗೆ ಅವಕಾಶ ಅಂತಾ ನಿಮ್ಮ ಚೇಲಾಗಳಿಗೆ ಟಿಕೆಟ್ ಕೊಟ್ರಾ? ಅಣ್ಣಾಮಲೈ ತಮಿಳುನಾಡಿನಿಂದ ಬಂದು ಇಲ್ಲಿ ನಮಗೆ ಹೇಳಬೇಕಾ? ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಎಲ್ಲರಿಗೂ ಅನ್ಯಾಯ ಮಾಡಿದರು. ಸತಾಯಿಸಿ ಓಡಾಡಿಸಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟರು. ಅಭಿಪ್ರಾಯ ಹಂಚಿಕೊಳ್ಳಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಿಲ್ಲ. ಬಸವರಾಜ್ ಬೊಮ್ಮಾಯಿ ಅವರ ಕೈಕಟ್ಟಿ ಹಾಕಿದರು. ಪಕ್ಷದ ಸೋಲಿಗೆ ರಾಜ್ಯಾಧ್ಯಕ್ಷರು ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕಿತ್ತು. ಅದನ್ನು ಬಿಟ್ಟು ಕಾರ್ಯಕರ್ತರನ್ನು ಬೆದರಿಸುವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ ಪರ ಮಾತನಾಡಿದರೆ ಪಕ್ಷ ವಿರೋಧಿ ಅಂತಾರೆ. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಶಹಬ್ಬಾಸ್ ಕೊಡ್ತಾರೆ. ಅನಿವಾರ್ಯವಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಗ್ರಾಮಪಂಚಾಯಿತಿ ಗೆಲ್ಲದವರು ನಮಗೆ ಮಾರ್ಗದರ್ಶನ ಮಾಡ್ತಾರೆ. ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡ್ತಾರೆ. ಅಣ್ಣಾಮಲೈ ಏನು ದೊಡ್ಡ ಹಿರೋನಾ? ಬಿಜೆಪಿ ನಾಯಕರು ಮಲಗಿದ್ದರು. ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಘೋಷಿಸುತ್ತಾ ಹೋದರು. ನಮ್ಮ ಪ್ರಣಾಳಿಕೆಯ ಅಂಶಗಳು ಜನರಿಗೆ ತಲುಪಲೇ ಇಲ್ಲ ಎಂದು ಕಿಡಿಕಾರಿದ್ದಾರೆ.