ಗದಗ: ಅಖಂಡ ಕರ್ನಾಟಕದ ಸಿಎಂ ಆಗುವ ಅರ್ಹತೆ ನನಗೂ ಇದೆ. ನಸೀಬ್ ಇದ್ರೆ ನಾನೂ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೆ ಸಿಎಂ ಖುರ್ಚಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರನ್ನು ತೆಗೆದು ನಾನು ಸಿಎಂ ಆಗಲು ಸಿದ್ಧನಿಲ್ಲ, ಕಾರಣ ಅವರು ಕೂಡ ಉತ್ತರ ಕರ್ನಾಟಕದವರು. ಆದರೆ ಅಖಂಡ ಕರ್ನಾಟಕ ಸಿಎಂ ಆಗ್ತಿನಿ ಹಾಗಂತ ಸಿಎಂ ಹುದ್ದೆಗಾಗಿ ಬೆನ್ನು ಹತ್ತಲ್ಲ. ಹೈಕಮಾಂಡ್ ಅವಕಾಶ ಕೊಟ್ರೆ, ನಸೀಬ್ ಇದ್ರೆ ಆಗ್ತೀನಿ ಎಂದು ಹೇಳಿದರು.
ನಾನು ಒಂಭತ್ತು ಬಾರಿ ಶಾಸಕನಾಗಿದ್ದೇನೆ. ಎಂಟು ಇಲಾಖೆ ನಿಭಾಯಿಸಿದ್ದೇನೆ. ರಾಜ್ಯದ ಹಿರಿಯ ರಾಜಕಾರಣಿ ಕೂಡ. ಹುಕ್ಕೇರಿ ಜನ ನನ್ನ ಆಯ್ಕೆ ಮಾಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದ್ರೆ ರಾಜೀನಾಮೆಗೂ ಸಿದ್ಧ ಎಂದರು.
ಇದೇ ವೇಳೆ ವೀರ ಸಾವರ್ಕರ್ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸಾವರ್ಕರ್ ವಿಚಾರವನ್ನು ಬೀದಿಗೆ ತರುವ ಕೆಲಸ ಮಾಡಬಾರದು. ಅವರು ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಶಿಕ್ಷೆ ಅನುಭವಿಸಿದ್ದವರು ಎಂದರು.