ನವದೆಹಲಿ: ಅನ್ನಭಾಗ್ಯ ಯೋಜನೆಗಾಗಿ ಹೆಚ್ಚುವರಿ ಅಕ್ಕಿ ನೀಡುವ ವಿಚಾರವಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಕೇಂದ್ರ ಸಚಿವರ ಭೇಟಿ ಬಳಿಕ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಮುನಿಯಪ್ಪ, ಕೇಂದ್ರ ಸಚಿವ ಗೋಯಲ್ ಅವರನ್ನು ಭೇಟಿಯಾಗಿ ಅಕ್ಕಿ ವಿತರಿಸುವಂತೆ ಮನವಿ ಮಾಡಿದ್ದೇನೆ. ಆದರೆ ಕೇಂದ್ರ ಸಚಿವರು ಅಕ್ಕಿ ನೀಡಲು ಆಗಲ್ಲ ಎಂದಿದ್ದಾರೆ. ಸ್ಟಾಕ್ ಇರುವ ಅಕ್ಕಿಯನ್ನು ಬಡವರಿಗೆ ಕೊಡುವಂತೆ ಕೇಳಿದರೂ ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವರ ಹೇಳಿಕೆ ಹಿಂದೆ ರಾಜಕೀಯ ದುರುದ್ದೇಶವಿರುವುದು ಕಾಣುತ್ತಿದೆ. ಎಫ್ ಸಿ ಐ ಬಳಿ ಸ್ಟಾಕ್ ಇದೆ, ಆದರೂ ಕೊಡಲ್ಲ. ಹಣ ನೀಡುತ್ತೇವೆ ಬಡವರಿಗಾಗಿ ಅಕ್ಕಿ ಪೂರೈಸುವಂತೆ ಮನವಿ ಮಾಡಿದರೂ ನಿರಾಕರಿಸಿದ್ದಾರೆ. ಅಕ್ಕಿಗಾಗಿ ನಾವು ಬೇರೆ ಮಾರ್ಗವನ್ನು ನೋಡಬೇಕಾಗಿದೆ. ಎಷ್ಟೇ ಕಷ್ಟವಾದರೂ ಜನರಿಗೆ ಉಚಿತವಾಗಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಹೇಳಿದರು.