ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅಂಬರೀಶ್ ಮೃತದೇಹ ಮಂಡ್ಯಕ್ಕೆ ಕರೆದೊಯ್ದ ವಿಚಾರದಿಂದ ಹಿಡಿದು, ಸ್ಮಾರಕ ನಿರ್ಮಾಣದವರೆಗೂ ಆದ ಘಟನೆಗಳ ಬಗ್ಗೆ ಸುಮಲತಾ ಭಾವುಕರಾಗಿ ಮಾತನಾಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ಕುಮಾರಸ್ವಾಮಿಯವರ ಮಾತುಗಳೇ ಅವರ ವ್ಯಕ್ತಿತ್ವ, ಸ್ವರೂಪ ಏನೆಂಬುದನ್ನು ಜನರಿಗೆ ತೋರುತ್ತದೆ. ಲೂಸ್ ಟಾಕ್ ಗೆ ಇದು ಉತ್ತಮ ಉದಾಹರಣೆ. ಅಂಬರೀಶ್ ಅಭಿಮಾನಿಗಳಿಗೆ ಅವರ ರಾಜಕಾರಣ ಗೊತ್ತಿದೆ. ಇಷ್ಟು ವರ್ಷ ಮಾತನಾಡದವರು ಈಗ್ಯಾಕೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ ? ನನಗೆ ಅನುಕಂಪದ ಅಲೆಯಿಂದ ಆಯ್ಕೆಯಾದೆ ಎಂದು ಹೇಳುವ ಕುಮಾರಸ್ವಾಮಿ ಇವರ್ಯಾಕೆ ಈಗ ಅನುಕಂಪ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕುತೂಹಲಕ್ಕೆ ಕಾರಣವಾಯ್ತು ಸಿಎಂ ಯಡಿಯೂರಪ್ಪ – ಎಂ.ಬಿ. ಪಾಟೀಲ್ ಭೇಟಿ
ಅಂಬರೀಶ್ ನಿಧನರಾದಾಗ ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದು, ಅಭಿ ಒತ್ತಾಯಿಸಿದ್ದಕ್ಕೆ. ಅಭಿ ಅಂದು ಅಲ್ಲಿನ ಜನರಿಗಾಗಿ ಅಭಿಮಾನಿಗಳಿಗಾಗಿ ಕರೆದೊಯ್ಯಲೇಬೇಕು ಎಂದು ಹೇಳಿದ್ದ. ಯಾರೇ ಸಿಎಂ ಆಗಿದ್ದರೂ ಅಂದು ಅದನ್ನೇ ಮಾಡುತ್ತಿದ್ದರು ಅದು ಸರ್ಕಾರದ ಕರ್ತವ್ಯ. ಅದು ಕುಮಾರಸ್ವಾಮಿ ಸಿಎಂ ಆಗಿದ್ದಕ್ಕೆ ಮಂಡ್ಯಕ್ಕೆ ಕರೆದೊಯ್ದಿದ್ದಲ್ಲ. ಅಂಬರೀಶ್ ಸ್ಮಾರಕ ವಿಚಾರವಾಗಿ ಹೆಚ್.ಡಿ.ಕೆ. ಭೇಟಿಗೆ ಹೋದಾಗ ಅವರು ಯಾವ ರೀತಿ ವರ್ತಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಏಕವಚನದಲ್ಲಿ ಮಾತಾಡಿ ಪೇಪರ್ ಮುಖಕ್ಕೆ ಎಸೆದು ರೇಗಾಡಿದ್ದರು. ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿಸಿದ್ದಲ್ಲ. ಹಾಲಿ ಸಿಎಂ ಬಿ.ಎಸ್.ವೈ. ಸಹಿಹಾಕಿ ಒಪ್ಪಿಗೆ ನೀಡಿದ್ದಾರೆ ಎಂದರು.
ಇನ್ನು ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತರಲಿ. ಅವರ ಹೆಸರು ಹೇಳಲೂ ಕುಮಾರಸ್ವಾಮಿಯವರಿಗೆ ಯೋಗ್ಯತೆ ಇಲ್ಲ. ಅವರು ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಫೋನ್ ಟ್ಯಾಪಿಂಗ್ ವಿಚಾರದ ಬಗ್ಗೆಯೂ ಮಾತನಾಡಿದ ಸುಮಲತಾ, ಸ್ವಾಮೀಜಿಗಳನ್ನು ರಾಜಕೀಯದಲ್ಲಿ ಎಳೆದುತರುವುದು ಸರಿಯಲ್ಲ. ಆದರೆ ಇವರು ಯಾವ ರೀತಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಹೇಳುವುದು ನನಗೆ ಅನಿವಾರ್ಯವಾಗಿದೆ. ಆದಿಚುಂಚನಗಿರಿ ಮಠಾಧೀಶರ ಫೋನ್ ಟ್ಯಾಪಾಗಿದ್ದು ನಿಜ. ಈ ಬಗ್ಗೆ ಕೇಳಿದರೆ ಕಳ್ಳ ತಾನು ಕಳ್ಳತನ ಮಾಡಿದೀನಿ ಎಂದು ಒಪ್ಪಿಕೊಳ್ಳುತ್ತಾನಾ? ಫೋನ್ ಟ್ಯಾಪ್ ಮಾಡೊದು ಅವರಿಗೆ ಅಭ್ಯಾಸವಾಗಿದೆ ಎಂದು ವಾಗ್ದಾಳಿ ನಡೆಸಿದರು.