ಮುಂದಿನ ಆದೇಶದವರೆಗೆ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಮೇಲಿನ ಸ್ಥಗಿತವು ಮುಂದುವರಿಯಲಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಅಧಿಕೃತ ಮಾಹಿತಿ ನೀಡಿದ್ದಾರೆ. ಜನವರಿ 19ರ ವರೆಗೆ ಈ ಹಿಂದೆ ಇದ್ದ ನಿರ್ಬಂಧವನ್ನು ಫೆಬ್ರವರಿ 28ರವರೆಗೆ ಮುಂದೂಡಲಾಗಿತ್ತು.
ಇಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಏರ್ ಬಬಲ್ ವ್ಯವಸ್ಥೆಯ ಅಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಸರಕು ಕಾರ್ಯಚರಣೆಗಳು ಹಾಗೂ ವಿಮಾನಯಾನಗಳಿಗೆ ಈ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಡಿಸಿಜಿಎ ಹೇಳಿದೆ.
ಭಾರತವು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಹ್ರೇನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕಜಕಿಸ್ತಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ನೆದರ್ಲ್ಯಾಂಡ್, ನೈಜೀರಿಯಾ, ಓಮನ್, ಕತಾರ್, ರಷ್ಯಾ, ರುವಾಂಡಾ, ಸೌದಿ ಅರೇಬಿಯಾ, ಸೀಶೆಲ್ಸ್, ಸಿಂಗಾಪುರ, ಶ್ರೀಲಂಕಾ, ಸ್ವಿಡ್ಜರ್ಲ್ಯಾಂಡ್, ತಾಂಜಾನಿಯಾ, ಉಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್, ಯುಎಸ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಏರ್ ಬಬಲ್ ಹೊಂದಿದೆ.
ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಚ್ 23, 2020 ರಿಂದ ಭಾರತದಲ್ಲಿ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಕ್ಕೆ ನಿಷೇಧ ಹೇರಲಾಗಿದೆ.