ಬಾದಾಮಿ: ಈ ಬಾರಿ ಮಳೆ ಪ್ರಮಾಣ ಹೆಚ್ಚಳವಾಗಿರುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಿದ್ದು, ಬಾದಾಮಿಯ ಕೆಂದೂರು ಗ್ರಾಮಸ್ಥರು ರೈತರು ಸಮಸ್ಯೆಗೆ ಸಿಲುಕಿದ್ದಾರೆ.
ಕೆಂದೂರು ಗ್ರಾಮದಲ್ಲಿ ಅಂತರ್ಜಲ ಹೆಚ್ಚಳದಿಂದಾಗಿ ಬೋರ್ ವೆಲ್ ಗಳಿಂದ ನೀರು ಹೊರಚಿಮ್ಮುತ್ತಿದ್ದು, ಜಮೀನುಗಳು ಜಲಾವೃತಗೊಂಡಿವೆ. ಬೋರ್ ವೆಲ್ ಗಳು, ಕೊಳವೆ ಬಾವಿಗಳಿಂದ ಏಕಾಏಕಿ ನೀರು ಹೊರಚಿಮ್ಮುತ್ತಿದ್ದು, ಕಳೆದ 20 ದಿನಗಳಿಂದ ಹೊಲಗದ್ದೆಗಳು ಕೆರೆಗಳಂತಾಗಿದ್ದು ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಹೊಲಗಳು ಸಂಪೂರ್ಣ ಜಲಾವೃತಗೊಂಡಿದ್ದು, ಶುಂಠಿ, ಕಡಲೆ, ಕಬ್ಬು ಬೆಳೆ ಸಂಪೂರ್ಣ ನೀರುಪಾಲಾಗಿವೆ. ಅಂತರ್ಜಲ ಹೆಚ್ಚಳದಿಂದ ಕಳೆದ 20 ದಿನಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿ ಕೂಡ ಕೆಂದೂರು ಗ್ರಾಮದತ್ತ ಮುಖಮಾಡಿಲ್ಲ. ರೈತರಿಗೆ ವರವಾಗಬೇಕಿದ್ದ ಅಂತರ್ಜಲವೇ ಈಗ ಮುಳುವಾಗುವಂತಾಗಿದೆ.