ಆಂಜನೇಯನ ಜನ್ಮಸ್ಥಳ ತಿರುಪತಿ ಎಂಬ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಹೇಳಿಕೆಯನ್ನು ತಳ್ಳಿ ಹಾಕಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಅಂಜನಾದ್ರಿಯೇ ಆಂಜನೇಯ ಜನ್ಮ ಸ್ಥಳವಾಗಿದ್ದು ಈ ಕುರಿತು ಶೀಘ್ರದಲ್ಲೇ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಸಚಿವ ಆನಂದ್ ಸಿಂಗ್ ಮಾತನಾಡಿ, ನಮ್ಮ ಪೂರ್ವಜರು ಈ ಹಿಂದಿನಿಂದಲೂ ಅಂಜನಾದ್ರಿ ಆಂಜನೇಯನ ಜನ್ಮಸ್ಥಳ ಎಂದು ಹೇಳಿಕೊಂಡು ಬರುತ್ತಿದ್ದರು. ನಾವು ನಮ್ಮ ಮಕ್ಕಳಿಗೂ ಅದನ್ನೇ ಹೇಳಿದ್ದೇವೆ. ಮುಂದಿನ ಪೀಳಿಗೆಯೂ ಇದನ್ನೇ ಹೇಳುತ್ತದೆ. ಹೀಗಾಗಿ ಇತಿಹಾಸ ತಿರುಚುವ ಕೆಲಸ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಂಜನಾದ್ರಿಯಲ್ಲೇ ಆಂಜನೇಯ ಹುಟ್ಟಿದ್ದು ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಹೀಗಾಗಿ ಟಿಟಿಡಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕಿಷ್ಕಿಂದೆ ಕುರಿತು ರಾಮಾಯಣದಲ್ಲಿ ಉಲ್ಲೇಖವಿದೆ. ಆಂಜನೇಯನ ಜನ್ಮಸ್ಥಳವಾಗಿರುವ ಅಂಜನಾದ್ರಿ ಪರ್ವತಕ್ಕೆ ಭಕ್ತರು ನಿತ್ಯವೂ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಇದರ ಮಧ್ಯೆ ಆಂಜನೇಯನ ಜನ್ಮಸ್ಥಳ ತಿರುಪತಿ ಎಂದು ಹೇಳುವ ಮೂಲಕ ಟಿಟಿಡಿ ಗೊಂದಲ ಸೃಷ್ಟಿಸುತ್ತಿದೆ ಎಂದು ತಿಳಿಸಿದರು. ಅಲ್ಲದೆ ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವೆ ಹೇಳಿದರು.