ಲಾಕ್ಡೌನ್, ಆನ್ಲೈನ್ ಶಿಕ್ಷಣ, ವರ್ಕ್ ಫ್ರಂ ಹೋಮ್ ಹೀಗೆ ಕೊರೊನಾದಿಂದಾಗಿ ಜನರ ಜೀವನ ಸಂಪೂರ್ಣ ವಿಭಿನ್ನವಾಗಿದೆ. ಈ ದಿನಗಳಲ್ಲಿ ಜನತೆ ಲ್ಯಾಪ್ ಟಾಪ್, ಮೊಬೈಲ್ಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇದರಿಂದಾಗಿ ಜನತೆಯಲ್ಲಿ ಸಮೀಪ ದೃಷ್ಟಿ ದೋಷ ಸಮಸ್ಯೆ ಹೆಚ್ಚಾಗಿ ಕಂಡು ಬರ್ತಿದೆ ಎಂಬ ಆಘಾತಕಾರಿ ವಿಚಾರವೊಂದು ಸಮೀಕ್ಷೆಯಲ್ಲಿ ಬಯಲಾಗಿದೆ.
ಚೀನಾ ಹಾಗೂ ನೆದರ್ಲೆಂಡ್ನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಕೋವಿಡ್ 19 ನಿರ್ಬಂಧಗಳ ಸಮಯದಲ್ಲಿ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಸಮೀಪ ದೃಷ್ಟಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕೆ ಕ್ವಾರಂಟೈನ್ ಸಮೀಪ ದೃಷ್ಟಿ ದೋಷ ಎಂದು ಹೆಸರಿಡಲಾಗಿದೆ.
ಚೀನಾದ 1,20,000 ಶಾಲೆಗಳಲ್ಲಿ ಆರರಿಂದ ಎಂಟು ವರ್ಷದ ಮಕ್ಕಳ ಮೇಲೆ ಈ ಅಧ್ಯಯನವನ್ನ ನಡೆಸಲಾಗಿತ್ತು.ಇದರ ಪ್ರಕಾರ ಹಿಂದಿನ ವರ್ಷಗಳಲ್ಲಿ ಹೋಲಿಸಿದ್ರೆ 2020ರಲ್ಲಿ ಮಕ್ಕಳಲ್ಲಿ ಮೂರು ಪಟ್ಟು ಹೆಚ್ಚು ದೃಷ್ಟಿ ದೋಷದ ಸಮಸ್ಯೆ ಕಂಡು ಬಂದಿದೆ.
ಈ ರೀತಿ ಚಿಕ್ಕ ಮಕ್ಕಳಲ್ಲೇ ದೃಷ್ಟಿದೋಷ ಕಾಣಿಸಿಕೊಳ್ತಾ ಇರೋದು ನಿಜಕ್ಕೂ ಒಂದು ಭಯಾನಕ ಸಮಸ್ಯೆಯಾಗಿದೆ. ಈ ಸಮಸ್ಯೆಯು ಮಕ್ಕಳು ಬೆಳೆದಂತೆ ಹೆಚ್ಚಾಗುತ್ತಾ ಹೋಗುತ್ತೆ. ಕೆಲವೊಂದು ಪ್ರಕರಣಗಳಲ್ಲಿ ಈ ದೃಷ್ಟಿದೋಷವು ಗಂಭೀರ ಸ್ವರೂಪವನ್ನೂ ಪಡೆದುಕೊಳ್ಳಬಹುದಾಗಿದೆ.
ಆರರಿಂದ ಹತ್ತು ವರ್ಷ ವಯಸ್ಸಿನಲ್ಲಿ ಕಣ್ಣುಗುಡ್ಡೆಗಳ ಬೆಳವಣಿಗೆ ವೇಗಗತಿಯಲ್ಲಿ ಸಾಗುತ್ತಿರುತ್ತೆ. ಆದರೆ ಈ ವಯಸ್ಸಿನಲ್ಲೇ ಕಣ್ಣಿಗೆ ಹೆಚ್ಚು ಒತ್ತಡ ಬಿದ್ದಲ್ಲಿ ಈ ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇನ್ನೂ ಹೆಚ್ಚು. ಮುಂದಿನ ದಿನಗಳಲ್ಲಿ ಇದು ಶಾಶ್ವತ ಕುರುಡುತನಕ್ಕೂ ಕಾರಣವಾಗಬಹುದು.
ಚಿಕ್ಕ ವಯಸ್ಸಿನಲ್ಲಿಯೇ ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ಗಳ ಬಳಕೆ ಅತಿಯಾಗಿರೋದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಮನ್ಸ್ಟರ್ ವಿಶ್ವವಿದ್ಯಾಲಯದ ನಿರ್ದೇಶಕ ನಿಕೋಲ್ ಎಟರ್ ಹೇಳಿದ್ದಾರೆ.
ಏಷ್ಯಾದ ರಾಷ್ಟ್ರಗಳಾದ ಹಾಂಗ್ಕಾಂಗ್, ತೈವಾನ್ ಹಾಗೂ ದಕ್ಷಿಣ ಕೊರಿಯಾಗಳಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ 20-30 ಪ್ರತಿಶತ ಪ್ರಮಾಣದಲ್ಲಿ 20 ವರ್ಷದ ಆಸುಪಾಸಿನವರಿಗೆ ದೂರದೃಷ್ಟಿ ದೋಷ ಇತ್ತು.
ಪ್ರಸ್ತುತ ಈ ಪ್ರಮಾಣವು 80 ಪ್ರತಿಶತವನ್ನ ಮೀರಿದೆ. ಅದೇ ಚೀನಾದಲ್ಲಿ ಐವರಲ್ಲಿ ನಾಲ್ಕು ಮಂದಿಗೆ ಸಮೀಪ ದೃಷ್ಟಿದೋಷವಿದೆ. ಇತ್ತ ಯುರೋಪ್ನಲ್ಲೂ ಅರ್ಧಕ್ಕರ್ಧ ಜನಸಂಖ್ಯೆ ದೃಷ್ಟಿದೋಷ ಹೊಂದಿದೆ.
ಎಲೆಕ್ಟ್ರಾನಿಕ್ ಮೀಡಿಯಾಗಳ ಅತಿಯಾದ ವೀಕ್ಷಣೆಯಿಂದ ಸಮೀಪ ದೃಷ್ಟಿದೋಷ ಮಾತ್ರವಲ್ಲದೇ ಮಕ್ಕಳ ಕಣ್ಣಿನ ತೇವ ಕೂಡ ಆವಿಯಾಗುವ ಸಾಧ್ಯತೆ ಇದೆ. ಅಲ್ಲದೇ ಸಂಜೆ ಬಳಿಕ ಅತಿಯಾದ ಸ್ಮಾರ್ಟ್ಫೋನ್ ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ ಕೂಡ ಕಂಡುಬರ್ತಿದೆ.