ದೆಹಲಿಯ ಕುತುಬ್ ಮಿನಾರ್ ಬಳಿ ಇರುವ ಮಸೀದಿಯನ್ನು 27 ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಅಂತ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಹೇಳಿದ್ದಾರೆ. ಇವರು ರಾಮಮಂದಿರದ ಇತಿಹಾಸ ಪುರಾವೆಗಳನ್ನು ಪತ್ತೆ ಮಾಡಿದ್ದರು. ಕುತುಬ್ ಮಿನಾರ್ ಬಳಿ ಕುವ್ವಾತ್-ಉಲ್-ಇಸ್ಲಾಂ ಮಸೀದಿ ಇದೆ. ಈ ಸ್ಥಳದಲ್ಲಿ ಅನೇಕ ದೇವಾಲಯಗಳ ಅವಶೇಷಗಳು ಸಹ ಪತ್ತೆಯಾಗಿವೆ ಎಂದು ಮೊಹಮ್ಮದ್ ಮಾಹಿತಿ ನೀಡಿದ್ದಾರೆ. ಅಲ್ಲಿ ಗಣೇಶ ಮಂದಿರಗಳಿದ್ದವು ಎಂಬುದಕ್ಕೂ ಸಾಕ್ಷ್ಯ ಸಿಕ್ಕಿದೆಯಂತೆ.
ʼʼಕುತುಬ್ ಮಿನಾರ್ ಬಳಿ ಒಂದಲ್ಲ ಹಲವು ಗಣೇಶ ಮೂರ್ತಿಗಳಿವೆ. ಇದು ಪೃಥ್ವಿರಾಜ್ ಚೌಹಾಣ್ ಅವರ ರಾಜಧಾನಿಯಾಗಿತ್ತು. ಕುವಾತ್-ಉಲ್-ಇಸ್ಲಾಂ ಮಸೀದಿಯನ್ನು ನಿರ್ಮಿಸಲು ಅಲ್ಲಿದ್ದ ಸುಮಾರು 27 ದೇವಾಲಯಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ದೇವಾಲಯಗಳನ್ನು ಕೆಡವಿದ ಕಲ್ಲುಗಳಿಂದಲೇ ಕುವ್ವಾತ್-ಉಲ್-ಇಸ್ಲಾಂ ಮಸೀದಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಆ ಸ್ಥಳದಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಶಾಸನಗಳಲ್ಲೂ ಇದರ ಉಲ್ಲೇಖವಿದೆ. 27 ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಬರೆಯಲಾಗಿದೆ. ಇದೊಂದು ಐತಿಹಾಸಿಕ ಸತ್ಯʼʼ ಎಂದು ಮೊಹಮ್ಮದ್ ಸಂಪೂರ್ಣ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ಕುತುಬ್ ಮಿನಾರ್ ಅನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ಸಮರ್ಕಂಡ್ ಮತ್ತು ಗುವ್ರಾದಲ್ಲಿ ಸಹ ನಿರ್ಮಿಸಲಾಗಿದೆ ಎಂದು ಕೂಡ ಮೊಹಮ್ಮದ್ ಹೇಳಿದ್ದಾರೆ. ಕೆ.ಕೆ. ಮೊಹಮ್ಮದ್ ಅವರು ಭಾರತೀಯ ಪುರಾತತ್ವ ಸಮೀಕ್ಷೆಯ ಮಾಜಿ ಪ್ರಾದೇಶಿಕ ನಿರ್ದೇಶಕರಾಗಿದ್ದಾರೆ. ಬಾಬರಿ ಮಸೀದಿಯ ಕೆಳಗೆ ದೇವಾಲಯದ ಅವಶೇಷಗಳಿವೆ ಎಂದು ಮೊದಲು ಪತ್ತೆ ಮಾಡಿದವರೇ ಮೊಹಮ್ಮದ್ ಅವರು.
ಅವರ ಸಂಶೋಧನೆಯನ್ನು 1990ರಲ್ಲಿ ಮೊದಲ ಬಾರಿ ಪ್ರಕಟಿಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಕೆ.ಕೆ. ಮೊಹಮ್ಮದ್ ಅವರ ಸಂಶೋಧನೆ, ಪ್ರಮುಖ ಪಾತ್ರ ವಹಿಸಿದೆ. ಅವರ ಸಂಶೋಧನೆಯು ಈ ನಿರ್ಧಾರಕ್ಕೆ ಪ್ರಮುಖ ಆಧಾರವಾಗಿದೆ.