ಭಾರತದಲ್ಲಿ “ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಳ”ವಾಗಿದೆ ಎಂಬ ಅಮೆರಿಕದ ಹೇಳಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
“ಜನರು” ಭಾರತದ ನೀತಿಗಳ ಬಗ್ಗೆ ಅಭಿಪ್ರಾಯಗಳನ್ನು ಹೊಂದಲು ಅರ್ಹರು, ನವದೆಹಲಿ ಕೂಡ ಅವರ ಬಗ್ಗೆ ಅಭಿಪ್ರಾಯಗಳನ್ನು ಹೊರಹಾಕಲು ಸಮಾನ ಅರ್ಹತೆ ಹೊಂದಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದರು. ಅವರ ಹೇಳಿಕೆ ಬಗ್ಗೆ ಜೈಶಂಕರ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿ ಇಬ್ಬರು ಸಿಖ್ಖರ ಮೇಲೆ ನಡೆದ ದ್ವೇಷಪೂರಿತ ದಾಳಿಯನ್ನು ಉಲ್ಲೇಖಿಸಿದ್ದಾರೆ.
ಸೋಮವಾರ ಅಮೆರಿಕ ಮತ್ತು ಭಾರತದ ಹಿರಿಯ ಸಚಿವರುಗಳ ಸಂವಾದದ ಬಳಿಕ ಮಾತನಾಡಿದ ಆಂಟೋನಿ ಬ್ಲಿಂಕೆನ್, ಭಾರತದಲ್ಲಿ ನಡೆಯುತ್ತಿರುವ ಕೆಲವೊಂದು ಕಳವಳಕಾರಿ ಬೆಳವಣಿಗೆಗಳ ಮೇಲೆ ಅಮೆರಿಕ ಕಣ್ಣಿಟ್ಟಿದೆ ಎಂದು ಹೇಳಿದ್ದರು. ಕೆಲವು ಸರ್ಕಾರಗಳು, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಹಕ್ಕುಗಳ ದುರುಪಯೋಗವಾಗ್ತಿದೆ ಎಂದು ಆರೋಪ ಮಾಡಿದ್ದರು.
ತಕ್ಷಣಕ್ಕೆ ಈ ಆರೋಪಗಳ ಬಗ್ಗೆ ಜೈಶಂಕರ್ ಪ್ರತಿಕ್ರಿಯೆ ನೀಡಿರಲಿಲ್ಲ. ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್ಸ್ ಪ್ರದೇಶದಲ್ಲಿ ಮಂಗಳವಾರ ಇಬ್ಬರು ಸಿಖ್ಖರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯನ್ನು ಜೈಶಂಕರ್ ಉಲ್ಲೇಖಿಸಿದ್ದಾರೆ, ಅಮೆರಿಕದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮೇಲೂ ನಮ್ಮ ಕಣ್ಣಿದೆ ಅಂತಾ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
ಅಮೇರಿಕಾದಲ್ಲಿ ಭಾರತೀಯ ಸಮುದಾಯದ ವಿರುದ್ಧ ದ್ವೇಷದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಕೂಡ ಇಲ್ಲಿ ಸ್ಮರಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ಶೇ.200 ರಷ್ಟು ಹೆಚ್ಚಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಅಮೆರಿಕದ ವಿಮಾನ ನಿಲ್ದಾಣವೊಂದರಲ್ಲಿ ಸಿಖ್ಖರ ಟರ್ಬನ್ ಬಗ್ಗೆ ಅಪಹಾಸ್ಯ ಮಾಡಿದ್ದ ಅಮೆರಿಕನ್ನರು, ಸಿಖ್ ಚಾಲಕನ ಮೇಲೆ ಹಲ್ಲೆ ಮಾಡಿದ್ದರು.