ಕೊರೋನಾ ವೈರಸ್ ನಿಂದ ಇತ್ತೀಚೆಗೆ ಗುಣಮುಖರಾಗಿರುವ ಹಲವರಿಗೆ ವ್ಯಾಕ್ಸಿನ್ ನ ಮುನ್ನೆಚ್ಚರಿಕಾ ಡೋಸ್ ಯಾವಾಗ ತೆಗೆದುಕೊಳ್ಳಬೇಕು ಅನ್ನೋ ಗೊಂದಲ ಇತ್ತು. ಈ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ, ಲ್ಯಾಬ್ ಪರೀಕ್ಷೆಯಲ್ಲಿ ಸಾಬೀತಾದ ಕೊರೊನಾ ವೈರಸ್ ಸೋಂಕನ್ನು ಹೊಂದಿರುವ ವ್ಯಕ್ತಿಗಳು ಚೇತರಿಸಿಕೊಂಡ ಮೂರು ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಅಥವಾ ಪ್ರಾಥಮಿಕ ವ್ಯಾಕ್ಸಿನ್ ಪಡೆಯಬಹುದು ಎಂದು ಸೂಚಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಅವರು ಮುನ್ನೆಚ್ಚರಿಕಾ ಡೋಸ್ ಗೆ ಸಂಬಂಧಿಸಿದಂತೆ ಹಲವು ಮನವಿಗಳನ್ನ ಸ್ವೀಕರಿಸಿದ್ದೇವೆ. ಮುನ್ನೆಚ್ಚರಿಕಾ ಡೋಸ್ ಗೆ ಅರ್ಹರಾಗಿರುವ ವ್ಯಕ್ತಿಗಳಲ್ಲಿ ಕೊರೋನಾ ಸೋಂಕಿರುವುದು RTPCR ಅಥವಾ SARS-2 ಕೋವಿಡ್-19 ಲ್ಯಾಬ್ ಪ್ರಯೋಗಾಲಯದಲ್ಲಿ ಸಾಬೀತಾದರೆ, ಅವರು ಸೋಂಕಿನಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಲಸಿಕೆ ಪಡೆಯಬಹುದು ಎಂದು ಹೇಳಿದ್ದಾರೆ. NTAGI ಶಿಫಾರಸ್ಸಿನ ಮೇರೆಗೆ ಕೇಂದ್ರ ಈ ಸಲಹೆ ನೀಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 10ನೇ ತಾರೀಖಿನಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡುವುದನ್ನ ಪ್ರಾರಂಭಿಸಲಾಗಿದೆ. 2ನೇ ಡೋಸ್ ಪಡೆದು 39 ವಾರಗಳು ಪೂರ್ಣಗೊಂಡವರಿಗೆ ಈ ಬೂಸ್ಟರ್ ಡೋಸ್ ನೀಡಲಾಗ್ತಿದೆ.