
ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ ಎನಿಸಿಬಿಡುತ್ತದೆ. ಆದರೆ ಆ ವಾಹನದ ಸಂಖ್ಯೆಯ ಮೂಲಕ ಮಾಲೀಕರನ್ನು ಪತ್ತೆ ಮಾಡಬಹುದು. ಅಂತಹ ಸುಲಭದ ಕೆಲವು ವಿಧಾನಗಳಿವೆ.
ಗಾಡಿ ನಂಬರ್ ಸಹಾಯದಿಂದ ವಾಹನದ ಮಾಲೀಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಕಚೇರಿಗೆ ಹೋಗಬೇಕಾಗಿಲ್ಲ, ಬದಲಿಗೆ ಮನೆಯಲ್ಲಿ ಕುಳಿತುಕೊಂಡು ಎಲ್ಲವನ್ನೂ ಮಾಡಬಹುದು.
ವಾಹನ ಸಾರಿಗೆ ವೆಬ್‌ಸೈಟ್‌ನಿಂದ ವಾಹನದ ಮಾಲೀಕರ ಬಗ್ಗೆ ಮಾಹಿತಿ ಸಂಗ್ರಹಿಸಬಹುದು. ಇದಕ್ಕಾಗಿ ವಾಹನ್ ಪರಿವಾಹನ್ ವೆಬ್‌ಸೈಟ್ ಹೆಚ್ಚು ಉಪಯುಕ್ತವಾಗಿದೆ. ಇದು ಸರ್ಕಾರಿ ವೆಬ್‌ಸೈಟ್ ಮತ್ತು ಇದನ್ನು ಭಾರತ ಸರ್ಕಾರ ನಡೆಸುತ್ತಿದೆ. ಈ ವೆಬ್‌ಸೈಟ್‌ನಿಂದ ವಾಹನ ಮಾಲೀಕರ ಮಾಹಿತಿಯನ್ನು ಪಡೆಯಲು vahan.parivahan.gov.in ಅನ್ನು ಓಪನ್ ಮಾಡಿ. ನಂತರ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು.
ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಮೇಲ್ ಐಡಿಯನ್ನು ನಮೂದಿಸುವ ಮೂಲಕ ಖಾತೆಯನ್ನು ರಚಿಸಿ. ಮೊಬೈಲ್‌ಗೆ ಬಂದ OTP ಅನ್ನು ನಮೂದಿಸಿ ಮತ್ತು ಹೊಸ ಪಾಸ್‌ವರ್ಡ್ ಅನ್ನು ಕೊಡಿ. ಈ ಪ್ರಕ್ರಿಯೆ ಬಳಿಕ ಲಾಗ್-ಇನ್ ಪೇಜ್ ತೆರೆದುಕೊಳ್ಳುತ್ತದೆ. ಲಾಗ್-ಇನ್ ಆದ ಬಳಿಕ ನಿಮಗೆ ಬೇಕಾದ ಯಾವುದೇ ವಾಹನ ಮಾಹಿತಿಯನ್ನು ಪಡೆಯಲು ಅದರ ನಂಬರ್ ಪ್ಲೇಟ್ ಸಂಖ್ಯೆಯನ್ನು ನಮೂದಿಸಿ. ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ, ‘ವಾಹನ ಹುಡುಕಾಟ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಎಲ್ಲಾ ವಿವರಗಳನ್ನು ಪಡೆಯಬಹುದು.
SMS ಸಹಾಯದಿಂದ ಮಾಹಿತಿ ಪಡೆಯುವುದು ಹೇಗೆ ?
ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೆ ಟೆನ್ಷನ್ ಮಾಡಿಕೊಳ್ಳಬೇಡಿ. ಇಂಟರ್ನೆಟ್ ಇಲ್ಲದಿದ್ದರೂ ವಾಹನದ ಮಾಲೀಕರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ನೀವು ಇದನ್ನು SMS ಮೂಲಕ ಪಡೆಯಬಹುದು. ಮೊದಲು ನಿಮ್ಮ ಫೋನ್‌ನಲ್ಲಿ SMS ಅಪ್ಲಿಕೇಶನ್ ಅನ್ನು ತೆರೆಯಬೇಕು, ನಂತರ ಅದರಲ್ಲಿ ವಾಹನದ ಸಂಖ್ಯೆಯನ್ನು ಟೈಪ್ ಮಾಡಿ 7738299899ಗೆ ಕಳುಹಿಸಬೇಕು. SMS ಮೂಲಕ ತಕ್ಷಣವೇ ನಿಮಗೆ ವಾಹನದ ಎಲ್ಲಾ ಮಾಹಿತಿ ಸಿಗುತ್ತದೆ.