ಕಳೆದ ಕೆಲವು ದಿನಗಳಿಂದ ಪ್ರಪಂಚದಾದ್ಯಂತ ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇದರ ಪರಿಣಾಮ ಏಷ್ಯಾ ಮಾರುಕಟ್ಟೆಯ ಮೇಲೂ ಗೋಚರಿಸುತ್ತಿದ್ದು, ಇಲ್ಲಿ ಅಕ್ಕಿಯ ಬೆಲೆ ಸುಮಾರು 15 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಭಾರತದಿಂದ ಬಾಸ್ಮತಿ ಹೊರತಾದ ಅಕ್ಕಿಯ ರಫ್ತು ನಿಷೇಧ ಮತ್ತು ಥೈಲ್ಯಾಂಡ್‌ನಲ್ಲಿ ಬರಗಾಲದ ಕಾರಣ ಇಳುವರಿ ಕಡಿಮೆಯಾಗಿರುವುದು ಈ ಬೆಲೆ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗ್ತಿದೆ.
ಥಾಯ್ ಅಕ್ಕಿಯ ಬೆಲೆ ಕೂಡ ಪ್ರತಿ ಟನ್‌ಗೆ 648 ಡಾಲರ್ ಆಗಿದ್ದು, ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಕಿ ದರದಲ್ಲಿ ಶೇ.50ರಷ್ಟು ಏರಿಕೆ ದಾಖಲಾಗಿರುವುದು ಆಘಾತಕಾರಿ. ಅಕ್ಕಿ, ಏಷ್ಯಾ ಮತ್ತು ಆಫ್ರಿಕಾದ ಮುಖ್ಯ ಧಾನ್ಯಗಳಲ್ಲಿ ಒಂದಾಗಿದೆ. ಈ ಎರಡೂ ಖಂಡಗಳಲ್ಲಿ ಲಕ್ಷಾಂತರ ಜನರು ಅನ್ನ ಮತ್ತು ಅಕ್ಕಿಯಿಂದ ಮಾಡಿದ ಇತರ ತಿನಿಸುಗಳನ್ನು ಪ್ರಮುಖ ಆಹಾರವಾಗಿ ಸೇವನೆ ಮಾಡುತ್ತಾರೆ. ಹಾಗಾಗಿ ಅಕ್ಕಿ ಬೆಲೆ ಏರಿಕೆ ನೇರವಾಗಿ ಅನೇಕ ದೇಶಗಳ ಮೇಲೆ ಪರಿಣಾಮ ಬೀರಲಿದೆ.
ಪರಿಣಾಮ ಆಮದು ವೆಚ್ಚ ಕೂಡ ಹೆಚ್ಚಾಗುವ ಆತಂಕ ಎದುರಾಗಿದೆ. ಥೈಲ್ಯಾಂಡ್‌ನಲ್ಲಿ ಭತ್ತದ ಬೆಳೆ ಹಾನಿಗೊಳಗಾಗಿದೆ. ಥಾಯ್ಲೆಂಡ್ ಸರ್ಕಾರವು ಕಡಿಮೆ ನೀರಿನ ಅಗತ್ಯವಿರುವ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸೂಚಿಸಿದೆ. ಎಲ್ ನಿನೋದಿಂದಾಗಿ ಥೈಲ್ಯಾಂಡ್ನಲ್ಲಿ ಈ ವರ್ಷ 40 ಪ್ರತಿಶತ ಮಳೆ ಕಡಿಮೆಯಾಗಿದೆ. ಇದರ ಪರಿಣಾಮ ಭತ್ತದ ಬೆಳೆಯ ಮೇಲಾಗಿದ್ದು, ಉತ್ಪಾದನೆ ಕುಸಿದಿದೆ.
ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತವು ಇತ್ತೀಚೆಗೆ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತು ನಿಷೇಧಿಸಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗಿದೆ. ಜಾಗತಿಕವಾಗಿ ಅಕ್ಕಿಯ ರಫ್ತಿನಲ್ಲಿ ಶೇಕಡಾ 40 ರಷ್ಟನ್ನು ಭಾರತ ಪೂರೈಸುತ್ತಿತ್ತು.