ಬೆಂಗಳೂರು: ಶಕ್ತಿ ಯೋಜನೆ ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿ.ಐ.ಎಲ್) ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬೆನ್ನಲ್ಲೇ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಬಸ್ ಹತ್ತಲು ಪರದಾಡುವ ಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ವಿದ್ಯಾರ್ಥಿಗಳು ಎಳೆ ಎಳೆಯಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಕಾರ್ಯಕ್ರಮವನ್ನು ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಪಿ.ಐ.ಎಲ್ ಸಲ್ಲಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಬಸ್ ನಲ್ಲಿ ಸೀಟ್ ಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು, ಮಕ್ಕಳು, ವಿದ್ಯಾರ್ಥಿಗಳು ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಿದ್ದ ಘಟನೆ ನಡೆದಿದೆ. ಶಾಲಾ-ಕಾಲೇಜು ಪರೀಕ್ಷೆಗಳಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ಹಣ ಈ ಯೋಜನೆಗೆ ಬಳಕೆಯಾಗಿದೆ. ವರ್ಷಕ್ಕೆ 3,200ರಿಂದ 3,400 ಕೋಟಿ ರೂಪಾಯಿ ನಷ್ಟವಾಗಲಿದೆ.
ಟಿಕೆಟ್ ಖರೀದಿಸಿದವರಿಗೆ ಬಸ್ ನಲ್ಲಿ ಶೇ. 50ರಷ್ಟು ಸೀಟ್ ಮೀಸಲಿಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿ.ಐ.ಎಲ್ ಮೂಲಕ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.