ನವದೆಹಲಿ: ಮೇ 4 ರಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಇದೀಗ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಈ ಮೂಲಕ ಬಂಧಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.
ಪ್ರಕರಣದಲ್ಲಿ 8 ಪ್ರಮುಖ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಈ ಪೈಕಿ ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇಂದು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿಲಾಗಿದೆ.
ಶುಕ್ರವಾರ ನಾಲ್ವರು ಬಂಧಿತ ಆರೋಪಿಗಳನ್ನು 11 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಗುರುವಾರ ಆರೋಪಿಗಳನ್ನು ಬಂಧಿಸಿದ್ದರು. ಘಟನೆಯಲ್ಲಿ ಭಾಗಿಯಾಗಿರುವ ಕನಿಷ್ಠ ಎಂಟು ಜನರನ್ನು ತನಿಖಾ ತಂಡ ಗುರುತಿಸಿರುವುದರಿಂದ ಹೆಚ್ಚಿನ ಬಂಧನಗಳು ನಡೆಯಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ಭಯಾನಕ ಘಟನೆಯ 77 ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಪ್ರಕಾರ, ಪುರಾವೆಗಳ ಕೊರತೆಯಿಂದಾಗಿ ಅವರು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಭಯಾನಕ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡ ಆರೋಪಿಗಳಲ್ಲಿ ಒಬ್ಬನ ಮನೆಗೆ ಗುರುವಾರ ಗುಂಪೊಂದು ಬೆಂಕಿ ಹಚ್ಚಿದೆ. ವರದಿಯ ಪ್ರಕಾರ, ಈ ಮನೆ ಮುಖ್ಯ ಆರೋಪಿ ಹುಯಿರೆಮ್ ಹೆರೋದಾಸ್ ಮೀಟಿಗೆ ಸೇರಿದೆ. ಆನ್ ಲೈನ್ ನಲ್ಲಿ ಹಲವಾರು ವೀಡಿಯೊಗಳಲ್ಲಿ ಪ್ರತಿಭಟನಾಕಾರರ ಗುಂಪು, ಹೆಚ್ಚಾಗಿ ಮಹಿಳೆಯರು ಆರೋಪಿಯ ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸಿದೆ.