ಎಲ್ಲಾ ಅರ್ಹ ಫಲಾನುಭವಿಗಳಿಗೆ 100 ಪ್ರತಿಶತ ಕೊರೊನಾ ಲಸಿಕೆಯನ್ನು ನೀಡಿದ ಕರ್ನಾಟಕದ ಮೊದಲ ಜಿಲ್ಲೆ ಎಂಬ ಕೀರ್ತಿಗೆ ಬೆಂಗಳೂರು ಗ್ರಾಮಾಂತರ ಪಾತ್ರವಾಗಿದೆ. ರಾಜ್ಯ ಸರ್ಕಾರವು ನೀಡಿರುವ ಮಾಹಿತಿಯ ಪ್ರಕಾರ ಕೊರೊನಾ ಲಸಿಕೆಗೆ ಅರ್ಹರಿರುವ ಪ್ರತಿಯೊಬ್ಬರೂ 2 ಡೋಸ್ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಈ ವಿಶೇಷ ಸಾಧನೆಯನ್ನು ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ಹಾಗೂ ಜಿಲ್ಲಾಡಳಿತದ ಸಿಬ್ಬಂದಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದರ ಜೊತೆಯಲ್ಲಿ ರಾಜ್ಯದಲ್ಲಿ ಇನ್ನೂ 11 ಜಿಲ್ಲೆಗಳು ಈ ಗುರಿಯನ್ನು ತಲುಪಲು ಇನ್ನೇನು ಕೆಲವೇ ಕೆಲವು ಹೆಜ್ಜೆ ದೂರದಲ್ಲಿವೆ ಎನ್ನಲಾಗಿದೆ. ಈಗಾಗಲೇ ಈ 11 ಜಿಲ್ಲೆಗಳು 90 ಪ್ರತಿಶತಕ್ಕೂ ಅಧಿಕ ಕೊರೊನಾ ಲಸಿಕೆಯ ಡಬಲ್ ಡೋಸ್ನ್ನು ಜನತೆಗೆ ನೀಡಿವೆ.
ಈ ನಡುವೆ ಬೆಂಗಳೂರು ಗ್ರಾಮಾಂತರವು ಕೊರೊನಾ ಲಸಿಕೆಯ ವಿಚಾರದಲ್ಲಿ ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಭಾನುವಾರದಂದು ಬೆಂಗಳೂರು ಗ್ರಾಮಾಂತರದಲ್ಲಿ 11,938 ಕೊರೊನಾ ಪ್ರಕರಣಗಳು ಹಾಗೂ 14 ಕೊರೊನಾ ಸಾವುಗಳು ವರದಿಯಾಗಿವೆ.