ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯಾದ್ಯಂತ ಮತ್ತೆ ನೈಟ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಎಂ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ರಾಜ್ಯಾದ್ಯಂತ ಡಿಸೆಂಬರ್ 28ರಿಂದ ಹತ್ತು ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದರು.
ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಬಹಿರಂಗ ಪಾರ್ಟಿಗಳಿಗೂ ಕಡಿವಾಣ ಹಾಕಲಾಗಿದೆ. ಸಭೆ-ಸಮಾರಂಭಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚುತ್ತಿದ್ದು, ಈವರೆಗೆ 38 ಜನರಲ್ಲಿ ವೈರಸ್ ಪತ್ತೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಲಸಿಕೆ ನೀಡಿಕೆಯಲ್ಲಿ ಮೊದಲ ಡೋಸ್ ಶೇ.90ರಷ್ಟು ಜನರಿಗೆ ಹಾಕಲಾಗಿದ್ದು, ಶೇ.75ರಷ್ಟು ಜನರು 2ನೇ ಡೋಸ್ ಪಡೆದುಕೊಂಡಿದ್ದಾರೆ. ಒಮಿಕ್ರಾನ್ ಪ್ರಕರಣ ವೇಗವಾಗಿ ಹರಡುತ್ತಿರುವುದರಿಂದ ಜನರು ನಿರ್ಲಕ್ಷ ಮಾಡದೇ 2ನೇ ಡೋಸ್ ಲಸಿಕೆಯನ್ನು ತಕ್ಷಣ ಪಡೆದುಕೊಳ್ಳಬೇಕು. ಇದರಿಂದ ಮಾತ್ರ ರೋಗನಿರೋಧಕ ಶಕ್ತಿ ಹೆಚ್ಚಳವಾಗಲು ಸಾಧ್ಯ ಎಂದು ಹೇಳಿದರು.
ಇನ್ನು 4000 ಐಸಿಯು ಬೆಡ್ ಸಿದ್ಧಪಡಿಸಲಾಗಿದೆ. 7500 ಬೆಡ್ ಗಳು ಐಸಿಯು ಬೆಡ್ ಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜನವರಿ 10ರಿಂದ ರಾಜ್ಯದಲ್ಲಿ ಬೂಸ್ಟರ್ ಡೋಸ್ ನೀಡಲಾಗುವುದು. ಆಯಾ ಕ್ಷೇತ್ರಗಳಲ್ಲಿ ಸಚಿವರು ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.