ಬೆಂಗಳೂರು: ಹೈಕಮಾಂಡ್ ನನಗೆ ಈವರೆಗೂ ಯಾವುದೇ ಸೂಚನೆ ನೀಡಿಲ್ಲ. ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಜುಲೈ 25ರಂದು ಕೇಂದ್ರ ನೀಡುವ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪಕ್ಷದ ನಾಯಕರು ಸಿಎಂ ಸ್ಥಾನದಲ್ಲಿ ಮುಂದುವರೆಯುವುದು ಬೇಡ ಎಂದು ಯಾವಾಗ ಸೂಚಿಸುತ್ತಾರೋ ಆಗ ರಾಜೀನಾಮೆ ನೀಡಲು ಸಿದ್ಧ. ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆಗೆ ಸಿದ್ಧ ಎಂದು 2 ತಿಂಗಳ ಹಿಂದೆಯೇ ನಾನು ಹೇಳಿದ್ದೆ ಎಂದರು.
ಹೈಕಮಾಂಡ್ ನನಗಿನ್ನೂ ಯಾವುದೇ ಸೂಚನೆ ನೀಡಿಲ್ಲ. ಜುಲೈ 25ರಂದು ವರಿಷ್ಠರು ಏನು ಸೂಚನೆ ನೀಡುತ್ತಾರೆ ಎಂದು ಕಾಯುತ್ತಿದ್ದೇನೆ. ಈಗಲೇ ತೀರ್ಮಾನಕ್ಕೆ ಬರುವುದು ಬೇಡ. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಏನು ಸಲಹೆ ನೀಡುತ್ತಾರೆ ಅದನ್ನು ನಾನು ಪಾಲಿಸಲು ಸಿದ್ಧ. ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದರು.