ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ MI-17V5 ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರು ಬಳಿ ದಟ್ಟ ಕಾನನದಲ್ಲಿ ಪತನಗೊಂಡಿದ್ದು, ದುರ್ಘಟನೆಯಲ್ಲಿ 13 ಜನರು ದುರ್ಮಮರಣಕ್ಕೀಡಾಗಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ ದುರಂತದಲ್ಲಿ 13 ಜನರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಗುರುತು ಪತ್ತೆಗಾಗಿ ಮೃತದೇಹಗಳ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಿಪಿನ್ ರಾವತ್ ವೆಲ್ಲಿಂಗ್ಟನ್ ಸೇನಾ ಕಾಲೇಜಿನ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ದುರಂತಕ್ಕೀಡಾಗಿದೆ. ಮರಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್ ಮರಕ್ಕೆ ಅಪ್ಪಳಿಸುತ್ತಿದ್ದಂತೆ ಡಿಕ್ಕಿ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಹೆಲಿಕಾಪ್ಟರ್ ನಲ್ಲಿದ್ದವರೆಲ್ಲರೂ ಬೆಂಕಿ ಹೊತ್ತಿಕೊಂಡು ಉರಿದು ಕೆಳಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.