ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿರುವ ಮೌಲ್ವಿ ವಾಸಿಂ ಪಠಾಣ್ ಏಕಾಏಕಿ ಪ್ರತ್ಯಕ್ಷವಾಗಿದ್ದು, ತನಗೆ ಜೀವ ಭಯವಿದೆ, ಗಲಭೆಗೆ ನಾನು ಕಾರಣ ಅಲ್ಲ, ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾನೆ.
ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬಳಿಕ ತಲೆಮರೆಸಿಕೊಂಡಿದ್ದ ವಾಸಿಂ ಪಠಾಣ್, ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ನನ್ನ ಜೀವಕ್ಕೆ ಅಪಾಯವಿದೆ. ಜೀವ ಭಯದಿಂದಾಗಿ ನಾನು ಎಲ್ಲರ ಎದುರು ಬರುತ್ತಿಲ್ಲ. ಆದರೆ ಶೀಘ್ರದಲ್ಲಿ ಪೊಲೀಸರ ಮುಂದೆ ಹಾಗೂ ಜಮಾತ್ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾನೆ.
ಅಂದು ಠಾಣೆಯ ಬಳಿ ದೂರು ನೀಡಲು ಜನ ಸೇರಿದ್ದರು. ನನಗೆ ಫೋನ್ ಮಾಡಿ ಕರೆದು ಮಾತನಾಡಲು ಹೇಳಿದ್ದರು. ಗಲಭೆಗೆ ತಿರುಗಿದ ಕೂಡಲೇ ಸಮಾಧಾನ ಮಾಡಲು ಹೇಳಿದ್ದರು. ಸಮಾಧಾನ ಮಾಡಲು ಹೇಳಿ ಜೀಪ್ ಹತ್ತಲು ಹೇಳಿದ್ದರು. ನನ್ನ ಬಳಿ ಮೈಕ್ ಇರಲಿಲ್ಲ. ಎಲ್ಲರೂ ಘೋಷಣೆ ಕೂಗುತ್ತಿದ್ದರು. ಆ ಸಮಯದಲ್ಲಿ ಕರೆಂಟ್ ಹೋಯ್ತು. ಗಲಭೆ ಜೋರಾಯ್ತು. ನಾನು ಅಲ್ಲಿಯೇ ಇದ್ದುದರಿಂದ ನನ್ನ ಮೇಲೆ ಆರೋಪ ಬಂದಿದೆ ಹೊರತು ನಾನು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡಿಲ್ಲ. ನಾನು ಸಮಾಧಾನ ಮಾಡಿರುವ ವಿಡಿಯೋ ಬಂದಿಲ್ಲ ಎಂದಿದ್ದಾನೆ.
ಅಲ್ಲದೇ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ನಾನೇ ಗಲಭೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗುತ್ತಿದೆ. ನನಗೆ ಗಲಭೆ ಸೃಷ್ಟಿಸುವ ಯಾವ ಉದ್ದೇಶವೂ ಇಲ್ಲ. ನನಗೆ ಜೀವ ಬೆದರಿಕೆ ಇರುವುದರಿಂದ ಎಲ್ಲರ ಮುಂದೆ ಬರುತ್ತಿಲ್ಲ. ಆದರೆ ಶೀಘ್ರದಲ್ಲಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.