ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯಂತರ ಮೌಖಿಕ ಆದೇಶವನ್ನಷ್ಟೇ ನೀಡಿದ್ದ ಹೈಕೋರ್ಟ್ ಪೂರ್ಣ ಪೀಠ ಇದೀಗ ಲಿಖಿತ ಆದೇಶ ಪ್ರಕಟಿಸಿದೆ.
ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಮುಂದುವರೆದಿದ್ದು, ಇದೀಗ ಮಧ್ಯಂತರ ಆದೇಶ ಪ್ರಕಟಿಸಿರುವ ನ್ಯಾಯಪೀಠ, ನಮ್ಮದು ನಾಗರಿಕ ಸಮಾಜ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯವೆಸಗಲು ಅವಕಾಶವಿಲ್ಲ ಎಂದು ಹೇಳಿದೆ.
ಪ್ರತಿಭಟನೆಯಿಂದಾಗಿ ಶಾಲಾ-ಕಾಲೇಜುಗಳು ಬಂದ್ ಆಗಬಾರದು. ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಅವಧಿವರೆಗೆ ಬಂದ್ ಆಗುವುದು ಸಂತಸದ ಸಂಗತಿಯಲ್ಲ. ಶೈಕ್ಷಣಿಕ ವರ್ಷ ವಿಳಂಬ ವಿದ್ಯಾರ್ಥಿ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ಉನ್ನತ ಶಿಕ್ಷಣಕ್ಕೆ ಈಗಾಗಲೇ ಸಮಯ ನಿಗದಿಯಾಗಿದೆ. ಶೀಘ್ರದಲ್ಲಿಯೇ ಶಾಲಾ-ಕಾಲೇಜುಗಳು ಆರಂಭವಾಗಬೇಕು. ಪ್ರಕರಣದ ವಿಚಾರಣೆ ತುರ್ತು ಆಧಾರದ ಮೇಲೆ ನಡೆಸಲಾಗುತ್ತದೆ ಎಂದು ತಿಳಿಸಿದೆ.