ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಇದೀಗ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿಗೆ ಮುಂದಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿಯಾಗುವುದು ಖಚಿತವಾಗಿದೆ ಎಂದರು.
ಜನವರಿ 3 ಅಥವಾ 4ರಂದು ಸಿಎಂ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಸಭೆಯಲ್ಲಿ ಯಾವೆಲ್ಲ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಮೂರನೇ ಅಲೆ ನಿಶ್ಚಿತ ಎಂಬ ವಾತಾವರಣವಿದೆ. ಹಾಗಾಗಿ ಕೋವಿಡ್ ನಿಯಂತ್ರಣಕ್ಕೆ ಜನ ಸಹಕಾರ ಕೊಡಬೇಕು. ಯಾವುದೇ ರ್ಯಾಲಿ, ಸಭೆ-ಸಮಾರಂಭಗಳ ಬಗ್ಗೆ ನಮಗೆ ಗೊತ್ತಿಲ್ಲ. ನಮಗೆ ಜನರ ಜೀವ ಮುಖ್ಯ. ಈ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.