ಮಡಿಕೇರಿ: ಮಳೆಹಾನಿ ಪ್ರದೇಶ ವೀಕ್ಷಣೆಗೆ ಕೊಡಗು ಜಿಲ್ಲೆಗೆ ಆಗಮಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೋಬ್ಯಾಕ್ ಅಭಿಯಾನ ತೀವ್ರಗೊಳಿಸಿದ್ದಾರೆ.
ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಾ ಮುಖಿಯಾಗಿದ್ದು, ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ, ನೂಕಾಟ-ತಳ್ಳಾಟ ನಡೆದಿದೆ. ತಿಮ್ಮಯ್ಯ ವೃತ್ತದ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರು ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆಯುವ ಯತ್ನ ನಡೆಸಿದ್ದಾರೆ. ಆದರೆ ಕಾರಿನ ಮೇಲೆ ಎಸೆದ ಮೊಟ್ಟೆ ಸ್ವಲ್ಪದರಲ್ಲಿ ತಪ್ಪಿ ಕೆಳಕ್ಕೆ ಬಿದ್ದಿದೆ.
ಅಲ್ಲದೇ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮತ್ತೆ ಗಲಾಟೆ ಆರಂಭವಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ತಿಮ್ಮಯ್ಯ ವೃತ್ತ ಹಾಗೂ ಮಡಿಕೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.