ಮುಂಬೈ: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
49 ಶಾಸಕರ ಸಹಿಯಿರುವ ಪತ್ರದೊಂದಿಗೆ ಮುಂಬೈಗೆ ವಾಪಸ್ ಆಗಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ, ಬಿಜೆಪಿ ನಾಯಕ ಫಡ್ನವಿಸ್ ಅವರನ್ನು ಭೇಟಿಯಾಗಿದ್ದು, ಬಳಿಕ ಉಭಯ ನಾಯಕರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ರಾಜ್ಯಪಾಲರು ಸಮಯಾವಕಾಶ ನೀಡಿದರೆ ಇಂದು ಸಂಜೆ 7 ಗಂಟೆಗೆ ಮುಂಬೈ ರಾಜಭವನದಲ್ಲಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಹಾಗೂ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಉಳಿದ ಶಾಸಕರು ನಾಳೆ ಪದಗ್ರಹಣ ಮಾಡಲಿದ್ದಾರೆ.
ನಾಳೆ ಬಿಜೆಪಿಯ 28 ಹಾಗೂ ಶಿಂಧೆ ಬಣದ 13 ಶಾಸಕರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.