ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಹಿಜಾಬ್ ವಿವಾದದ ಕುರಿತ ತೀರ್ಪು ಇಂದು ಹೊರ ಬಿದ್ದಿದ್ದು, ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಅಲ್ಲದೇ ಸರ್ಕಾರದ ವಸ್ತ್ರ ಸಂಹಿತೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಇಡೀ ದೇಶದ ಗಮನ ಸೆಳೆದಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಹೊರಬಿದ್ದಿದೆ. ಹಿಜಾಬ್ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿ ಹಿಡಿದಿದೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಉಡುಪಿ ಮೂಲದ ಕೆಲ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 11 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇದೀಗ ತೀರ್ಪು ಪ್ರಕಟಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದ್ದು, ಅರ್ಜಿ ವಜಾಗೊಳಿಸಿದೆ. ಅಲ್ಲದೇ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ತಿಳಿಸಿದೆ.