ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ, ಹೈಕಮಾಂಡ್ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ. ಎಲ್ಲವನ್ನೂ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಕೋರ್ ಕಮಿಟಿ ಸಭೆಯಲ್ಲಿ ಕೂಡ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಕಾಂಗ್ರೆಸ್ ನಿಂದ ಸರ್ವನಾಶ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ ವಿಷವಿದ್ದಂತೆ. ವಿಷ ಹೆಚ್ಚಾದರೆ ಸಾಯುತ್ತೆ ಅಷ್ಟೇ. ಮೈತ್ರಿ ಸರ್ಕಾರವನ್ನು ಬೀಳಿಸಿದ್ದೇ ಕಾಂಗ್ರೆಸ್. ನಿಧಾನವಾಗಿ ವಿಷ ಇಂಜಕ್ಟ್ ಮಾಡಿ ಸರ್ಕಾರವನ್ನೇ ಕೆಡವಿದವರು ಕಾಂಗ್ರೆಸ್. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕುಮಾರಸ್ವಾಮಿಗೂ ಕಿರುಕುಳ ನೀಡಿದ್ದಾರೆ. ಕಾಂಗ್ರೆಸ್ ನಂಬಿದರೆ ಗೋವಿಂದಾ… ಎಂದು ಹೇಳಿದರು.