ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜಮೀರ್ ಅಹ್ಮದ್ ಮೇಲೆ ದಾಳಿ ನಡೆಯುತ್ತಿದ್ದಂತೆ ಇತ್ತ ಹಾಲಿ ಸಚಿವರೊಬ್ಬರಿಗೆ ನಡುಕ ಶುರುವಾಗಿದೆ.
ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿರುವ ಜಮೀರ್ ಅಹ್ಮದ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ. ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಕಳೆದ ಎರಡು ಗಂಟೆಯಿಂದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಕೆಲ ಮಹತ್ವದ ದಾಖಲೆಗಳು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿವೆ.
ಶಾಸಕ ಜಮೀರ್ ಅಹ್ಮದ್ ಸಚಿವರೊಬ್ಬರ ಜತೆ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ನ್ಯಾಷನಲ್ ಟ್ರಾವೆಲ್ಸ್ ಬಸ್ ಖರೀದಿ ಸೇರಿದಂತೆ ಹಲವು ಆರ್ಥಿಕ ವ್ಯವಹಾರಗಳಲ್ಲಿ ಸಚಿವರೊಬ್ಬರು ಜಮೀರ್ ಅಹ್ಮದ್ ಜತೆ ಪಾರ್ಟ್ನರ್ ಶಿಪ್ ನಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ತರಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹಾಲಿ ಸಚಿವರೊಬ್ಬರಿಗೆ ಇದೀಗ ನಡುಕ ಶುರುವಾಗಿದೆ.