ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಆಡಳಿತರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಂಚೂಣಿಯಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಕುರಿತು ಒಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದರ ಮಧ್ಯೆ ಸಚಿವ ಮುರುಗೇಶ್ ನಿರಾಣಿ ತಮ್ಮ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಏಕಾಏಕಿ ದೆಹಲಿಗೆ ತೆರಳಿದ್ದು, ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸಿದ್ದ ಮುರುಗೇಶ್ ನಿರಾಣಿ ಖಾಸಗಿ ಕಾರ್ಯ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಯಾವುದೇ ರಾಜಕೀಯ ವಿಷಯ ಮಾತನಾಡಲು ಅಲ್ಲ ಎಂದು ತಿಳಿಸಿದ್ದರು.
ತಡರಾತ್ರಿ ಮುರುಗೇಶ್ ನಿರಾಣಿ ಬೆಂಗಳೂರಿಗೆ ಬಂದಿದ್ದು, ತಮ್ಮ ಆಪ್ತರ ಬಳಿ ʼಮೀಟಿಂಗ್ ಸಕ್ಸಸ್ʼ ಎಂದು ಹೇಳಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಮುರುಗೇಶ್ ನಿರಾಣಿ, ಬಿಜೆಪಿ ವರಿಷ್ಟರ ಬಳಿ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ಮಾತುಕತೆ ನಡೆಸಿದ್ದಾರಾ ಮತ್ತು ಇದರಲ್ಲಿ ಯಶಸ್ವಿಯಾಗಿದ್ದಾರಾ ಎಂಬ ಅನುಮಾನ ಕಾಡತೊಡಗಿದೆ.