ಬೆಳಗಾವಿ: ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು, ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 9 ಆರೋಪಿಗಳು ದೋಷಿಗಳು ಎಂದು ಬೆಳಗಾವಿಯ ಕೋಕಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ಕೋರ್ಟ್ ನ್ಯಾ.ಸಿ.ಎಂ. ಜೋಷಿ ತೀರ್ಪು ಪ್ರಕಟಿಸಿದ್ದು, ಬನ್ನಂಜೆ ರಾಜಾ ಸೇರಿದಂತೆ 9 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿವೇಕ್ ಉಪಾಧ್ಯಾಯ ಮೃತಪಟ್ಟಿದ್ದು, ಉಳಿದಂತೆ ಆರೋಪಿಗಳಾದ ಉತ್ತರ ಪ್ರದೇಶದ ಜಗದೀಶ್ ಪಟೇಲ್, ಬೆಂಗಳೂರಿನ ಅಭಿ ಭಂಡಗಾರ, ಉಡುಪಿಯ ಗಣೇಶ್ ಭಜಂತ್ರಿ, ಕೇರಳದ ಕೆ.ಎಂ. ಇಸ್ಮಾಯಿಲ್, ಹಾಸನದ ಮಹೇಶ್ ಅಚ್ಚಂಗಿ, ಕೇರಳದ ಎಂ.ಬಿ. ಸಂತೋಷ್, ಉಡುಪಿ ಮೂಲದ ಬನ್ನಂಜೆ ರಾಜಾ, ಬೆಂಗಳೂರಿನ ಜಗದೀಶ್ ಚಂದ್ರರಾಜ್, ಉತ್ತರ ಪ್ರದೇಶದ ಅಂಕಿತ್ ಕುಮಾರ್ ಕಶ್ಯಪ್ ದೋಷಿಗಳು. ಶಿಕ್ಷೆ ಪ್ರಮಾಣ ಏ.4ರಂದು ಪ್ರಕಟಿಸುವುದಾಗಿ ಆದೇಶ ನೀಡಿದ್ದಾರೆ.
3 ಕೋಟಿ ಹಫ್ತಾ ನೀಡದ ಕಾರಣಕ್ಕೆ 2013ರ ಡಿಸೆಂಬರ್ 21ರಂದು ಸುಪಾರಿ ನೀಡಿ ಅಂಕೋಲಾ ಉದ್ಯಮಿ, ಬಿಜೆಪಿ ಮುಖಂಡ ಆರ್.ಎನ್.ನಾಯಕ್ ಹತ್ಯೆ ಮಾಡಲಾಗಿತ್ತು. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 16 ಜನರ ವಿರುದ್ಧ ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ)ಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 2015ರ ಫೆ.12 ರಂದು ನಕಲಿ ಪಾಸ್ ಪೋರ್ಟ್ ಆರೋಪದಡಿ ಮೊರಕ್ಕೊದಲ್ಲಿ ಬನ್ನಂಜೆ ರಾಜಾ ಬಂಧನವಾಗಿತ್ತು. ಬಳಿಕ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಪ್ರಕರಣದಲ್ಲಿ ಒಟ್ಟು 16 ಆರೋಪಿಗಳಲ್ಲಿ 13 ಆರೋಪಿಗಳ ಬಂಧನವಾಗಿತ್ತು. ಇದೀಗ 9 ಆರೋಪಿಗಳು ದೋಷಿಗಳೆಂದು ಸಾಬೀತಾಗಿದ್ದು, ಮೂವರು ನಿರ್ದೋಷಿಗಳೆಂದು ಕೋರ್ಟ್ ಆದೇಶ ನೀಡಿದೆ.