ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 12 ಜನರಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಈ ಕುರಿತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ರೂಪಾಂತರಿ ವೈರಸ್ ಸೋಂಕು ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ 20 ವರ್ಷದ ಮಹಿಳೆ, 54 ವರ್ಷದ ಮಹಿಳೆ, 57 ವರ್ಷದ ವ್ಯಕ್ತಿ ಹಾಗೂ ಮಂಗಳೂರಿನಲ್ಲಿ ಘಾನಾದಿಂದ ಬಂದಿದ್ದ 27 ವರ್ಷದ ವ್ಯಕ್ತಿ, ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ್ದ 31 ವರ್ಷದ ವ್ಯಕ್ತಿ, 42 ವರ್ಷದ ವ್ಯಕ್ತಿ, 18 ವರ್ಷದ ಯುವತಿ ಹಾಗೂ 21 ವರ್ಷದ ಯುವಕನಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.
ಅಲ್ಲದೇ ಯುಕೆಯಿಂದ ಬೆಂಗಳೂರಿಗೆ ಆಗಮಿಸಿದ್ದ 11 ವರ್ಷದ ಬಾಲಕ, ಸ್ವಿಜರ್ಲ್ಯಾಂಡ್ ನಿಂದ ಮೈಸೂರಿಗೆ ಆಗಮಿಸಿದ್ದ 9 ವರ್ಷದ ಬಾಲಕಿ ಹಾಗೂ ನೈಜಿರಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 59 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.