ಬೆಂಗಳೂರು: ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ರಾಜ್ಯಕ್ಕೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದೆಯೇ ಎಂಬ ಅತಂಕ ಶುರುವಾಗಿದೆ. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಇಬ್ಬರ ಪೈಕಿ ಓರ್ವರಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆಯಾಗಿದ್ದು, ಇಂಥದ್ದೊಂದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದು, ದಕ್ಷಿಣ ಆಫ್ರಿಕಾದಿಂದ ಬಂದಿರುವ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅದರಲ್ಲಿಯೂ 63 ವರ್ಷದ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯ ಲ್ಯಾಬ್ ವರದಿ ಇಂದು ಬರಲಿದ್ದು, ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಪಿಸಿಆರ್ ಟೆಸ್ಟ್ ನಲ್ಲಿ ಪತ್ತೆಯಾಗುತ್ತಾ ಒಮಿಕ್ರಾನ್…? WHO ನೀಡಿದೆ ಈ ಮಾಹಿತಿ
ಐ ಸಿ ಎಂ ಆರ್ ಜೊತೆಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಸಂಜೆ ವೇಳೆಗೆ ಲ್ಯಾಬ್ ವರದಿ ಬರಲಿದ್ದು ಬಳಿಕ ಮಾಹಿತಿ ನೀಡಲಾಗುವುದು ಎಂದರು. ಇನ್ನು ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈಗಾಗಲೇ 12 ದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಕಳೆದ 15 ದಿನಗಳಿಂದ ಆಫ್ರಿಕನ್ ದೇಶಗಳಿಂದ ರಾಜ್ಯಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.