ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿದೆ. ರಷ್ಯಾ ಸೇನೆ ವಶಪಡಿಸಿಕೊಂಡ ನಂತರ ನಿಷ್ಕ್ರಿಯಗೊಂಡಿದ್ದ ಚೆರ್ನೋಬಿಲ್ ಪರಮಾಣು ಸ್ಥಾವರದ ಸಮೀಪವಿರುವ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗಾಮಾ ವಿಕಿರಣದ ಮಟ್ಟಗಳು ಪತ್ತೆಯಾಗಿವೆ. ಉಕ್ರೇನ್‌ನ ಪರಮಾಣು ಶಕ್ತಿ ನಿಯಂತ್ರಣ ಸಂಸ್ಥೆ ಈ ವಿಚಾರವನ್ನು ಬಹಿರಂಗಪಡಿಸಿದೆ.
ಆದ್ರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ಭಾರೀ ಪ್ರಮಾಣದ ಮಿಲಿಟರಿ ಉಪಕರಣಗಳ ಚಲನೆ ಮತ್ತು ಗಾಳಿಯಲ್ಲಿ ಕಲುಷಿತ ವಿಕಿರಣಶೀಲ ಧೂಳು ಹರಡಿದ್ದರಿಂದ ವಿಕಿರಣದ ಮಟ್ಟ ಏರಿಕೆಯಾಗಿದೆ ಎನ್ನಲಾಗ್ತಾ ಇದೆ.
ಆದ್ರೆ ರಷ್ಯಾದ ವಾಯುಗಾಮಿ ಪಡೆಗಳು ಯಾವುದೇ ಸಂಭವನೀಯ ಪ್ರಚೋದನೆಗಳನ್ನು ತಡೆಯುವ ಮೂಲಕ ಸ್ಥಾವರವನ್ನು ರಕ್ಷಿಸುತ್ತಿವೆ ಅಂತಾ ಅಲ್ಲಿನ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ವಿಕಿರಣ ಮಟ್ಟ ಸಾಮಾನ್ಯವಾಗಿದೆ ಎಂದಿದ್ದಾರೆ.
ರಷ್ಯಾ ವಶಪಡಿಸಿಕೊಂಡಿರೋ ಈ ಕೈಗಾರಿಕಾ ಸ್ಥಳದಲ್ಲಿ ಯಾವುದೇ ಸಾವು-ನೋವು ಅಥವಾ ವಿನಾಶ ಸಂಭವಿಸಿಲ್ಲ ಎಂದು ವಿಯೆನ್ನಾ ಮೂಲದ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಹೇಳಿದೆ.
1986ರಲ್ಲಿ ಇದೇ ಪರಮಾಣು ಸ್ಥಾವರದಲ್ಲಿ ಸ್ಫೋಟ ಸಂಭವಿಸಿತ್ತು. ವಿಕಿರಣಶೀಲ ಮೋಡ ಯುರೋಪ್ ನಾದ್ಯಂತ ಹರಡಿತ್ತು. ಬಳಿಕ ಹಾನಿಗೊಳಗಾದ ರಿಯಾಕ್ಟರ್ ಅನ್ನು ಶೆಲ್ ನಿಂದ ಮುಚ್ಚಲಾಗಿತ್ತು. ಇದೀಗ ಪರಮಾಣು ಸ್ಥಾವರ ರಷ್ಯಾ ವಶದಲ್ಲಿರೋದ್ರಿಂದ ಉಕ್ರೇನ್ ನಾದ್ಯಂತ ಆತಂಕ ಆವರಿಸಿದೆ.