
ಟೆಕ್ ದೈತ್ಯ ಆ್ಯಪಲ್ ಕಂಪನಿಯು ರಷ್ಯಾದಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಉಕ್ರೇನ್ನ ಮೇಲೆ ರಷ್ಯಾದ ದಾಳಿಯ ಬಳಿಕ ಮಾಸ್ಕೋಗೆ ಉಂಟಾದ ಬಹುದೊಡ್ಡ ನಷ್ಟಗಳಲ್ಲಿ ಇದೂ ಒಂದಾಗಿದೆ.
ಪಾಶ್ಚಿಮಾತ್ಯ ಸರ್ಕಾರಗಳು, ವಿವಿಧ ಕ್ರೀಡಾ ಸಂಸ್ಥೆಗಳು ಮಾತ್ರವಲ್ಲದೇ ದೊಡ್ಡ ದೊಡ್ಡ ಕಂಪನಿಗಳು ಕೂಡ ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಂಡಿವೆ.
ನಾವು ರಷ್ಯಾದಲ್ಲಿ ಎಲ್ಲಾ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದ್ದೇವೆ. ಕಳೆದ ವಾರದಿಂದ ನಾವು ನಮ್ಮ ಉತ್ಪನ್ನಗಳನ್ನು ರಷ್ಯಾಗೆ ರಫ್ತು ಮಾಡುವುದನ್ನೇ ನಿಲ್ಲಿಸಿದ್ದೇವೆ ಎಂದು ಆ್ಯಪಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೇ ಆ್ಯಪಲ್ ಪೇ ಹಾಗೂ ಇತರೆ ಸೇವೆಗಳನ್ನು ಸೀಮಿತಗೊಳಿಸಿದ್ದೇವೆ ಎಂದು ಐಫೋನ್ ತಯಾರಕ ಕಂಪನಿಯು ಹೇಳಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಆರ್ಟಿ ಹಾಗೂ ಸ್ಪುಟ್ನಿಕ್ ಸುದ್ದಿ ಅಪ್ಲಿಕೇಶನ್ಗಳನ್ನು ಇನ್ಮುಂದೆ ರಷ್ಯಾವನ್ನು ಹೊರತುಪಡಿಸಿ ಬೇರೆ ದೇಶಗಳಲ್ಲಿ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
ನಾವು ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣಗಳ ಬಗ್ಗೆ ಅತಿಯಾದ ಕಳವಳವನ್ನು ಹೊಂದಿದ್ದೇವೆ. ರಷ್ಯಾದ ಹಿಂಸಾಚಾರದಿಂದಾಗಿ ನರಳುತ್ತಿರುವ ಎಲ್ಲಾ ಜನರೊಂದಿಗೆ ನಾವಿದ್ದೇವೆ ಎಂದು ಆ್ಯಪಲ್ ಕಂಪನಿಯು ಹೇಳಿದೆ.