ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಎದೆನೋವಿನಿಂದ ಚಿತ್ರದುರ್ಗ ಕಾರಾಗೃಹದಲ್ಲಿಯೇ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಮುರುಘಾಶ್ರೀಗಳಿಗೆ ಮೂವರು ವೈದ್ಯರ ತಂಡದಿಂದ ತಪಾಸಣೆ ನಡೆಸಲಾಗಿದ್ದು, ಇಸಿಜಿ, ಎಂ ಆರ್ ಐ ಸ್ಕ್ಯಾನ್ ಕೂಡ ಮಾಡಲಾಗಿದೆ. ಈ ವೇಳೆ ಮುರುಘಾಶ್ರೀಗಳಿಗೆ ಹಲವು ವರ್ಷಗಳಿಂದ ಬಿಪಿ, ಶುಗರ್ ಇರುವುದು ತಿಳಿದುಬಂದಿದೆ. ಅಲ್ಲದೇ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮುರುಘಾಶ್ರೀಗಳು ತೀವ್ರವಾದ ಬೆನ್ನು ನೋವಿನಿಂದಲೂ ಬಳಲುತ್ತಿದ್ದು, ಹೃದಯ ಸಂಬಂಧಿ ಸಮಸ್ಯೆ ಕೂಡ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಸ್ಪತ್ರೆ ವೈದ್ಯ ಡಾ.ಬಸವರಾಜ್ ತಿಳಿಸಿದ್ದಾರೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮುರುಘಾ ಶ್ರೀಗಳು ಶಿಫ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ.